ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಅನ್ಯಾಯ

Congress
Published on

ಚಿತ್ರದುರ್ಗ: ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ ಎಂದು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಖಾಲಿ ಚೊಂಬು ಪ್ರದರ್ಶಿಸುವ ಮೂಲಕ ಶನಿವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ 5,300 ಕೋಟಿ ರೂ. ಘೋಷಿಸಿದ್ದು, ಈವರೆಗೂ ನಯಾ ಪೈಸೆಯೂ ಬಿಡುಗಡೆಯಾಗಿಲ್ಲ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯದ ಜನತೆಗೆ ಮಂಕು ಬೂದಿ ಎರಚುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಕರ್ನಾಟಕ ರಾಜ್ಯದಿಂದಲೇ ಕೇಂದ್ರಕ್ಕೆ 4.5 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹವಾಗುತ್ತ್ತಿದೆ. ಆದರೆ, ಕೇವಲ 53 ಸಾವಿರ ಕೋಟಿ ರೂ. ಹಿಂದಿರುಗುತ್ತಿದೆ. ಇದರ ವಿರುದ್ಧ ರಾಜ್ಯದೆಲ್ಲ ಸಂಸದರು ದನಿ ಎತ್ತಿ ಹೆಚ್ಚಿನ ಅನುದಾನ ತರಬೇಕು ಎಂದು ಒತ್ತಾಯಿಸಿದರು.

ಭದ್ರಾ ಮೇಲ್ದಂಡೆ, ಮೇಕೆದಾಟು, ಕೃಷ್ಣ ಕಾಮಗಾರಿಗಳು ಇನ್ನೂ ಪ್ರಗತಿಯಲ್ಲಿವೆ. ಕೇಂದ್ರ ಬಜೆಟ್‌ನಲ್ಲಿ ನೀರಾವರಿ, ರೈಲ್ವೆ ಯೋಜನೆಗಳಿಗೆ ಒತ್ತು ನೀಡಿಲ್ಲ. ಇದರ ವಿರುದ್ಧ ನಮ್ಮ ಹೋರಾಟ ನಿರಂತರ ಎಂದು ಎಚ್ಚರಿಸಿದರು.

ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ಕೇಂದ್ರ ಸರ್ಕಾರದ ಕಳೆದ ಬಾರಿಯ ಬಜೆಟ್‌ನಲ್ಲೂ ಕರ್ನಾಟಕಕ್ಕೆ ಅದರಲ್ಲೂ ಚಿತ್ರದುರ್ಗಕ್ಕೆ ಯಾವ ಅನುಕೂಲವೂ ಆಗಿಲ್ಲ. ಬಿಜೆಪಿ-ಜೆಡಿಎಸ್ ಮೈತ್ರಿಯಾಗಿ ರಾಜ್ಯದಲ್ಲಿ 19 ಸಂಸದರು ಗೆದ್ದಿದ್ದಾರೆ. ಕಾಂಗ್ರೆಸ್ ಸಂಸದರೊಂದಿಗೆ ಕೈಜೋಡಿಸಿ ಅಭಿವೃದ್ಧಿಗೆ ಅನುದಾನ ತರಬೇಕು ಎಂದು ಆಗ್ರಹಿಸಿದರು.

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಸಂಸದ ಗೋವಿಂದ ಎಂ. ಕಾರಜೋಳ ಅವರು ಕೇಂದ್ರಕ್ಕೆ ಅರ್ಜಿ ಕೊಡುತ್ತಿರುವುದು ನಗೆಪಾಟಲಾಗಿದೆ. ಅವರದೆ, ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿರುವಾಗ ಅನುದಾನ ತರಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಕುಟುಕಿದರು.

ಬಿಹಾರ, ಆಂಧ್ರ ಪ್ರದೇಶಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡಿರುವ ಕೇಂದ್ರ ಸರ್ಕಾರ ರಾಜ್ಯಕ್ಕೆ ನಿರಂತರವಾಗಿ ಮೋಸ ಮಾಡುತ್ತಿದೆ. ಅರ್ಧಕ್ಕೆ ನಿಂತಿರುವ ಯೋಜನೆಗಳಿಗೆ ತ್ವರಿತವಾಗಿ ಅನುದಾನ ಬಿಡುಗಡೆಗೊಳಿಸಬೇಕು ಎಂದು ಮನವಿ ಮಾಡಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್, ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಪದಾಧಿಕಾರಿಗಳಾದ ಕೆ.ಎಂ.ಹಾಲಸ್ವಾಮಿ, ಕೆ.ಪಿ.ಸಂಪತ್‌ಕುಮಾರ್, ಡಿ.ಎನ್.ಮೈಲಾರಪ್ಪ, ಗೀತಾ ನಂದಿನಿಗೌಡ, ಮುನಿರಾ ಎ.ಮಕಾಂದಾರ್, ಆರ್.ಕೆ.ಸರ್ದಾರ್, ಮೋಕ್ಷಾ ರುದ್ರಸ್ವಾಮಿ, ರುದ್ರಾಣಿ, ಭಾಗ್ಯಮ್ಮ, ಇಂದಿರಾ, ಸುಧಾ, ಎನ್‌.ಡಿ.ಕುಮಾರ್‌, ರಾಜ್ಯ ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ವಿಧಾನಪರಿಷತ್ ಮಾಜಿ ಸದಸ್ಯೆ ಜಯಮ್ಮ ಬಾಲರಾಜ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಆರ್.ಶಿವಣ್ಣ, ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net