ಕೇಂದ್ರ ಸರ್ಕಾರದ ಸೂಚನೆಯಂತೆ ಬಿಪಿಎಲ್ ಕಾರ್ಡ್ ಪರಿಷ್ಕರಣೆ: ಡಾ. ಪುಷ್ಪಾ ಅಮರನಾಥ್

mysore
Published on

ಮೈಸೂರು: ಕೇಂದ್ರ ಸರ್ಕಾರದ ಸೂಚನೆಯಂತೆ ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡ್‌ಗಳನ್ನು ಪರಿಷ್ಕರಿಸಿದ್ದು, ಇದರಿಂದಾಗಿ 4,221 ಬಿಪಿಎಲ್ ಕಾರ್ಡ್‌ಗಳು ಎಪಿಎಲ್ ಕಾರ್ಡ್‌ಗಳಾಗಿ ಪರಿವರ್ತನೆಯಾಗಿವೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ತಿಳಿಸಿದರು.

ಬಿಪಿಎಲ್ ಕಾರ್ಡ್ ರದ್ದು ಮಾಡಿ ಬಡವರಿಗೆ ವಂಚನೆ ಮಾಡಲಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದ್ದು, ಯಾವುದೇ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಯಲ್ಲಿ ಒಬ್ಬನೇ ಒಬ್ಬ ಅರ್ಹ ಫಲಾನುಭವಿಯ ಬಿಪಿಎಲ್ ಕಾರ್ಡ್ ರದ್ದಾಗಲು ಬಿಡುವುದಿಲ್ಲ. ಅರ್ಹ ಫಲಾನುಭವಿಗೆ ಸೌಲಭ್ಯ ದೊರಕಿಸಲು ಪ್ರಾಧಿಕಾರ ಕೆಲಸ ಮಾಡಲಿದೆ. ಅರ್ಹ ಫಲಾನುಭವಿಗಳು ಆತಂಕ ಪಡುವ ಅಗತ್ಯ ಇಲ್ಲ ಎಂದರು

ಜಿಲ್ಲೆಯಲ್ಲಿ 6,91,370 ಬಿಪಿಎಲ್ ಕಾರ್ಡ್‌ಗಳು ಇವೆ.

ಇದರಲ್ಲಿ ತೆರಿಗೆದಾರರು ಮತ್ತು ಸರ್ಕಾರಿ ಅಧಿಕಾರಿಗಳ ಕುಟುಂಬದವರು ಕೂಡ ಬಿಪಿಎಲ್ ಕಾರ್ಡ್ ಹೊಂದಿದ್ದರು. ಪರಿಷ್ಕರಣೆ ಕಾರ್ಯದಲ್ಲಿ ಎಚ್.ಡಿ.ಕೋಟೆ-145, ಹುಣಸೂರು-260, ಕೆ.ಆರ್.ನಗರ-145, ಮೈಸೂರು- 2526, ನಂಜನಗೂಡು-317, ಪಿರಿಯಾಪಟ್ಟಣ-261, ಸಾಲಿಗ್ರಾಮ-131, ಸರಗೂರು-40, ತಿ.ನರಸೀಪುರ-396 ಸೇರಿದಂತೆ 4,221 ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್‌ಗೆ ವರ್ಗಾವಣೆ ಮಾಡಲಾಗಿದೆ ಎಂದರು.

ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲಾಗದೆ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಲಾಗುತ್ತಿದೆ ಎಂಬ ಪ್ರತಿಪಕ್ಷಗಳ ನಾಯಕರ ಹೇಳಿಕೆಯಲ್ಲಿ ಹುರುಳಿಲ್ಲ.

ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ರೂ. ಖರ್ಚು ಮಾಡುತ್ತಿರುವ ಕಾಂಗ್ರೆಸ್ ಸರ್ಕಾರವು ಬಡವರ ಹೊಟ್ಟೆ ತುಂಬಿಸುವ ಅನ್ನಭಾಗ್ಯ ಯೋಜನೆಗೆ ಕತ್ತರಿ ಹಾಕುವ ಕೆಟ್ಟ ಯೋಚನೆಯನ್ನೇ ಮಾಡಿಲ್ಲ. ರಾಜಕೀಯ ಲಾಭಕ್ಕಾಗಿ ಜನರ ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಕಿಡಿಕಾರಿದರು.

ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಜಾರಿಗಾಗಿ ‘ನಮ್ಮ ನಡಿಗೆ ಗ್ಯಾರಂಟಿ ಅನುಷ್ಠಾನದ ಕಡೆಗೆ’ ಅಭಿಯಾನ ಆಯೋಜಿಸಿದ್ದು, ಮೊದಲ ಹಂತವಾಗಿ ನಗರದ ಕೊಳಚೆ ಪ್ರದೇಶಗಳಲ್ಲಿ ಪಾದಯಾತ್ರೆ ಕೈಗೊಂಡು ಅರ್ಹ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ಕಲ್ಪಿಸಿಕೊಡಲಾಗುವುದು ಎಂದರು.

ಜಿಲ್ಲಾ ಮಟ್ಟದಲ್ಲಿ ಗ್ಯಾರಂಟಿ ಅದಾಲತ್ ಹಮ್ಮಿಕೊಳ್ಳಲು ಆಲೋಚಿಸಲಾಗಿದೆ. ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಸ್ಯೆಯನ್ನು ಸ್ಥಳದಲ್ಲೇ ಪರಿಹಾರಕ್ಕೆ ಕ್ರಮ ತೆಗೆದುಕೊಂಡು ನ್ಯಾಯ ಕೊಡಿಸುವ ಕೆಲಸವನ್ನು ಪ್ರಾಧಿಕಾರ ಮಾಡಲಿದೆ ಎಂದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ, ತಾಲೂಕು ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಪಂಚಾಯಿತಿ ಮತ್ತು ವಾರ್ಡ್ ಮಟ್ಟದಲ್ಲಿ ಸದಸ್ಯರನ್ನು ನೇಮಿಸಲಾಗುವುದು.

ಶೀಘ್ರದಲ್ಲೇ ಜಿಲ್ಲಾ ಪಂಚಾಯಿತಿಯಲ್ಲಿ ಕಚೇರಿಯನ್ನು ಸಹ ತೆರೆಯಲಾಗುವುದು ಎಂದು ತಿಳಿಸಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಅರುಣ್‌ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net