

ಮೈಸೂರು: ದೆಹಲಿಯ ಗಡಿಯಲ್ಲಿ ರೈತ ನಾಯಕ ಜಗತ್‌ಸಿಂಗ್ ದಲೈವಾಲಾ ಕೈಗೊಂಡಿರುವ 45 ದಿನಗಳ ಉಪವಾಸ ಸತ್ಯಾಗ್ರಹದ ಕುರಿತು ನಿರ್ಲಕ್ಷೃ ಧೋರಣೆ ಅನುಸರಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಜ.13ರಂದು ರಾಜ್ಯದ ಎಲ್ಲ ಜಿಲ್ಲಾ, ತಾಲೂಕು ಕೇಂದ್ರದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಸಂಯುಕ್ತ ಕಿಸಾನ್ ಮೋರ್ಚಾ ದಕ್ಷಿಣ ಭಾರತ ರಾಜ್ಯಗಳ ಸಂಚಾಲಕ, ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.
ಜ.14ರಿಂದ 16ರವರೆಗೆ ಹಳ್ಳಿ ಹಳ್ಳಿಗಳಲ್ಲಿ ಪಂಜಿನ ಪ್ರತಿಭಟನೆ ಮೂಲಕ ಪ್ರಧಾನಮಂತ್ರಿ ಹಾಗೂ ಕೇಂದ್ರ ಕೃಷಿ ಮಂತ್ರಿಯ ಪ್ರತಿಕೃತಿ ಸುಡಲಾಗುವುದು. ದೇಶಾದ್ಯಂತ ಕರೆ ನೀಡಲಾಗಿರುವ ಹಿನ್ನೆಲೆಯಲ್ಲಿ ಈ ಚಳವಳಿ ನಡೆಸಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎಂಎಸ್‌ಪಿ ಖಾತ್ರಿ ಕಾನೂನು ಜಾರಿ, ರೈತರ ಸಂಪೂರ್ಣ ಸಾಲಮನ್ನಾ, ಎಂ.ಎಸ್.ಸ್ವಾಮಿನಾಥನ್ ವರದಿ ಅನುಷ್ಠಾನಕ್ಕೆ ಆಗ್ರಹಿಸಿ ಜ.26ರಂದು ಟ್ರ್ಯಾಕ್ಟರ್ ಮೆರವಣಿಗೆ ನಡೆಸುವ ಮೂಲಕ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗುವುದು ಎಂದು ತಿಳಿಸಿದರು.
ಕೇಂದ್ರ ಸರ್ಕಾರವು ಕೂಡಲೇ ಮಾತುಕತೆ ನಡೆಸಿ ದಲೈವಾಲಾ ಪ್ರಾಣ ಉಳಿಸಬೇಕು. ಕೃಷಿ ಉತ್ಪನ್ನಗಳಿಗೆ ಎಂಎಸ್‌ಪಿ ಖಾತ್ರಿಪಡಿಸಲು ಕಾನೂನು ಜಾರಿ ತರಬೇಕು ಎಂದು ಒತ್ತಾಯಿಸಲು ಈ ಹೋರಾಟ ಹಮ್ಮಿಕೊಳ್ಳಲಾಗಿದೆ. ಈ ಹೋರಾಟದ ಮೂಲಕ ಕೇಂದ್ರ ಸರ್ಕಾರಕ್ಕೆ ಗಂಭೀರ ಎಚ್ಚರಿಕೆ ನೀಡಬೇಕು. ದೇಶದ ರೈತರ ಶಕ್ತಿ ತೋರಿಸಬೇಕು. ರೈತರ ಒಳಿತಿಗಾಗಿ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ದಲೈವಾಲಾ ಬೆಂಬಲಕ್ಕೆ ನಿಲ್ಲಬೇಕು ಎಂದು ರೈತರಲ್ಲಿ ಕೋರಿದರು.
31 ಜನ ಸಂಸದರ ಸಂಸದೀಯ ಮಂಡಳಿಯು ಎಂಎಸ್‌ಪಿ ಖಾತ್ರಿ ಕಾನೂನು ಜಾರಿ ಅವಶ್ಯಕವಾಗಿದೆ ಎಂದು ವರದಿ ನೀಡಿದೆ. ಅದೇ ರೀತಿ ಸುಪ್ರೀಂಕೋರ್ಟ್ ನೇಮಿಸಿರುವ ನ್ಯಾ.ನವಾಬ್ಸಿಂಗ್ ಸಮಿತಿ ಸಹ ಈ ರೀತಿಯ ವರದಿ ಸಲ್ಲಿಸಿದೆ. ಆದಾಗ್ಯೂ, ಇದನ್ನು ಜಾರಿ ಮಾಡುತ್ತಿಲ್ಲ ಎಂದು ಕಿಡಿಕಾರಿದರು.
ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅಧ್ಯಕ್ಷತೆಯ ಸಮಿತಿ 2011ರಲ್ಲಿ ಎಂಎಸ್‌ಪಿ ಖಾತ್ರಿ ಕಾನೂನು ರೈತರಿಗೆ ಅತ್ಯವಶ್ಯಕ ಎಂದು ಹೇಳಿತ್ತು. ಇದೀಗ ಪ್ರಧಾನಿಯಾದ ಬಳಿಕ ಮೋದಿ ಅವರು ಈ ಮಾತು ಮರೆತಿದ್ದಾರೆ ಎಂದು ಟೀಕಿಸಿದರು.
ಮುಖಂಡರಾದ ಅತ್ತಹಳ್ಳಿ ದೇವರಾಜ್, ಪಿ.ಸೋಮಶೇಖರ್. ಕಿರಗಸೂರ್ ಶಂಕರ, ಬರಡನಪುರ ನಾಗರಾಜ್, ಎಂ.ಬಿ.ಚೇತನ್, ಮಾರ್ಬಳ್ಳಿ ನೀಲಕಂಠಪ್ಪ, ಉಡಿಗಾಲ ರೇವಣ್ಣ, ಮುಡ್ಲುಪುರ ಶಿವಮೂರ್ತಿ, ಸಿಂಧುವಳ್ಳಿ ಬಸವಣ್ಣ, ಬಿ.ಪಿ.ಪರಶಿವಮೂರ್ತಿ, ಕುರುಬೂರು ಸಿದ್ದೇಶ್, ದೇವನೂರು ವಿಜಯೇಂದ್ರ, ಕುರುಬೂರು ಪ್ರದೀಪ್ ಇನ್ನಿತರರಿದ್ದರು.