

ವಿಜಯವಾಣಿ ಸುದ್ದಿಜಾಲ ಧಾರವಾಡ
ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿ ಅವರ ರಾಜಕೀಯ ಜೀವನ ಅಂತ್ಯಗೊಳಿಸಲು ಕೇಂದ್ರ ಸರ್ಕಾರ ನಡೆಸಿರುವ ಹುನ್ನಾರ ಖಂಡಿಸಿ ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿಯ ಗಾಂಧೀಜಿ ಪುತ್ಥಳಿ ಎದುರು ಬುಧವಾರ ಮೌನ ಪ್ರತಿಭಟನೆ ನಡೆಸಲಾಯಿತು.
ರಾಹುಲ್ ಗಾಂಧಿ ಎಂದಿಗೂ ಭಾರತದ ಸ್ವಾಭಿಮಾನಕ್ಕೆ ಧಕ್ಕೆ ಉಂಟುಮಾಡಿಲ್ಲ. ದೇಶಭಕ್ತ, ಸ್ವಾತಂತ್ರೃ ಹೋರಾಟಗಾರ ಮನೆತನದಿಂದ ಬಂದ ಅವರು, ಭಾರತದ ಸಾರ್ವಭೌಮತ್ವ ಎತ್ತಿ ಹಿಡಿಯುವ ಕೆಲಸ ಮಾಡಿದ್ದಾರೆ. ಕರ್ನಾಟಕದಲ್ಲಿ ಅವರು ಮಾಡಿದ ಚುನಾವಣಾ ಭಾಷಣ ಮುಂದಿಟ್ಟುಕೊಂಡು ರಾಜಕೀಯವಾಗಿ ಮುಗಿಸುವ ಷಡ್ಯಂತ್ರ ಮಾಡುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾರತ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಗೆ ಸಿಕ್ಕ ಜನಪ್ರಿಯತೆ, ಪ್ರೀತಿ, ವಿಶ್ವಾಸ ಮತ್ತು ಕರ್ನಾಟಕದಲ್ಲಿ ಅವರಿಗೆ ದೊರೆತ ಭವ್ಯ ಯಶಸ್ಸನ್ನು ಸಹಿಸಲಾರದೆ ರಾತ್ರೊರಾತ್ರಿ ಸಂಸತ್ ಸದಸ್ಯತ್ವ ಅನರ್ಹಗೊಳಿಸಲಾಗಿದೆ. ರಾಜ್ಯದಲ್ಲಿ ಭಾರತ ಜೋಡೊ ಯಾತ್ರೆ ಮಾಡಿದ ಮಾರ್ಗದ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಇದು ವಿರೋಧ ಪಕ್ಷದವರಿಗೆ ನುಂಗಲಾರದ ತುತ್ತಾಗಿದೆ ಎಂದು ಟೀಕಿಸಿದರು.
ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ, ದೀಪಕ ಚಿಂಚೋರೆ, ರಾಬರ್ಟ ದದ್ದಾಪುರಿ, ಇಸ್ಮಾಯಿಲ್ ತಮಾಟಗಾರ, ವಸಂತ ಅರ್ಕಾಚಾರ, ನಾಗರಾಜ ಗೌರಿ, ಬಸವರಾಜ ಕಿತ್ತೂರ, ಆನಂದ ಜಾಧವ, ಸ್ವಾತಿ ಮಾಳಗಿ, ಜೇಮ್ಸ್ ಯಾಮಾ,ದೀಪಾ ಗೌರಿ, ಬಸವರಾಜ ಗುರಿಕಾರ, ಪ್ರಕಾಶ ಹಳಿಯಾಳ, ಬಿ.ಎಚ್. ಪೂಜಾರ, ಗೀತಾ ತಾಂವಸಿ, ಕಾರ್ಯಕರ್ತರು, ಇತರರು ಇದ್ದರು.