ಕೇಂದ್ರ ಸರ್ಕಾರದ 8 ವರ್ಷಗಳ ಸಾಧನೆ ಬಿಂಬಿತ ಛಾಯಾಚಿತ್ರ ಪ್ರದರ್ಶನ

3
Published on

ಮೈಸೂರು: ಕೇಂದ್ರ ಸರ್ಕಾರದ 8 ವರ್ಷಗಳ ಸಾಧನೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೈಗೊಂಡಿರುವ ವಿಷನ್ 2047, ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಛಾಯಾಚಿತ್ರ ಪ್ರದರ್ಶನಕ್ಕೆ ಬುಧವಾರ ಚಾಲನೆ ನೀಡಲಾಯಿತು.
ಕೇಂದ್ರ ಸಂವಹನ ಇಲಾಖೆ, ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರ ಪಾಲಿಕೆಯಿಂದ ಜೆಎಲ್‌ಬಿ ರಸ್ತೆಯಲ್ಲಿರುವ ಮಹಾರಾಜ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಒಂದು ವಾರ ಕಾಲ ಆಯೋಜಿಸಿರುವ ಪ್ರದರ್ಶನ ಹಾಗೂ ವಿಚಾರ ಸಂಕಿರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ನೀಡಿದರು.
ಸಂಸದ ಪ್ರತಾಪಸಿಂಹ ಮಾತನಾಡಿ, ತಮ್ಮ 8 ವರ್ಷದ ಆಡಳಿತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿನ ಕುರಿತು ಅಪಾರ ಪ್ರೀತಿ ಹೊಂದಿದ್ದು, ಬೆಂಗಳೂರು-ಮೈಸೂರು ಹತ್ತು ಪಥದ ರಸ್ತೆ, ವಿಮಾನ ನಿಲ್ದಾಣ ಉನ್ನತೀಕರಣ, ರೈಲ್ವೆ ಜೋಡಿ ಹಳಿ, 10 ಹೊಸ ರೈಲು ಅಲ್ಲದೆ, ಕೈಗಾರಿಕೆಗಳ ಬೆಳವಣಿಗೆ ಉದ್ದೇಶದಿಂದ ಸೆಮಿ ಕಂಡಕ್ಟರ್ ಸ್ಥಾಪನೆಗೆ ಮುಂದಾಗಿದ್ದಾರೆ ಎಂದು ಬಣ್ಣಿಸಿದರು.
ನಗರದ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ನೀಡಿದ್ದು, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಸಲುವಾಗಿ, ಅಮೃತ ಯೋಜನೆಯಡಿ ಅನುದಾನ ನೀಡಿದ್ದಾರೆ. ಜಲಜೀವನ ಮಿಷನ್ ಅಡಿ ಮನೆಗೆ ನಲ್ಲಿ ನೀರು, ಪೈಪ್ ಲೈನ್ ಮೂಲಕ ಗ್ಯಾಸ್ ತಲುಪಿಸುವ ಯೋಜನೆ ಪ್ರಗತಿಯಲ್ಲಿದೆ ಎಂದು ಹೇಳಿದರು.
2014ರಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಗಾಂಧಿ ಕನಸಿನ ಸ್ವಚ್ಛ ಭಾರತ ಯೋಜನೆಗೆ ಮುನ್ನುಡಿ ಬರೆದು ಸಾರ್ವಜನಿಕರಲ್ಲಿ ಸ್ವಚ್ಛತೆಯ ಅರಿವು ಮೂಡಿಸಿದ್ದಾರೆ. ಮೈಸೂರಿನ ಸೂಯೇಜ್ ಫಾರ್ಮ್ ಸೇರಿದಂತೆ ರಾಜ್ಯದಲ್ಲಿರುವ ಸುಮಾರು 108 ಟನ್ ಕಸವನ್ನು ಲ್ಯಾಂಡ್ ಫಿಲ್ಲಿಂಗ್ ಮೂಲಕ 2025ರ ವೇಳೆಗೆ ನಿರ್ಮೂಲನೆ ಮಾಡಲು ಗಡುವು ನೀಡಿದ್ದಾರೆ ಎಂದು ತಿಳಿಸಿದರು.
ಭವಿಷ್ಯದ ಮಕ್ಕಳಿಗೆ ಉತ್ತಮ ಪರಿಸರ ನೀಡುವ ಉದ್ದೇಶದಿಂದ ಕೆಲಸ ಮಾಡುತ್ತಿದ್ದಾರೆ. ಅಭಿವೃದ್ಧಿಯನ್ನೇ ಗುರಿಯಾಗಿಸಿಕೊಂಡಿರುವ ಮೋದಿ ಅವರಿಗೆ ರಾಜಕೀಯ ಮುಖ್ಯವಲ್ಲ. ಜನರ ಹಿತಕ್ಕಾಗಿ ಜನಧನ್, ಉಜ್ವಲ ಯೋಜನೆ, ಕಿಸಾನ್ ಸಮ್ಮಾನ್, ಆತ್ಮನಿರ್ಭರ, ಬೀದಿ ಬದಿ ವ್ಯಾಪಾರಿಗಳಿಗೆ ಸ್ವನಿಧಿ ಯೋಜನೆ ಸೇರಿದಂತೆ ಬಡವರಿಗೆ, ದೀನ ದಲಿತರಿಗೆ ಹಲವಾರು ಯೋಜನೆಗಳನ್ನು ನೀಡುವ ಮೂಲಕ ನೆರವಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಶ್ರವಣ ದೋಷ ಇರುವ ಐವರಿಗೆ ಉಪಕರಣ, ಕೋವಿಡ್‌ನಿಂದ ಮೃತಪಟ್ಟ ಕುಟುಂಬಸ್ಥರಿಗೆ ಪರಿಹಾರ ಧನದ ಚೆಕ್ ವಿತರಿಸಲಾಯಿತು. ಕೇಂದ್ರ ಸರ್ಕಾರದ ಸಾಧನೆ, ಸ್ವಾತಂತ್ರ್ಯ ಚಳವಳಿಯಲ್ಲಿ ಕರ್ನಾಟದ ಕೊಡುಗೆಯನ್ನು ಬಿಂಬಿಸುವ 64 ಛಾಯಾಚಿತ್ರಗಳ ಪ್ರದರ್ಶನವಿದ್ದು, 6 ಮಳಿಗೆಗಳಲ್ಲಿ ರಕ್ತದಾನ, ಶ್ರವಣ ಸಮಸ್ಯೆ ಸೇರಿದಂತೆ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ನೀಡಲಾಗುತ್ತಿದೆ.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಲ್.ನಾಗೇಂದ್ರ ಮಾತನಾಡಿದರು. ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ಜಿ.ರೂಪಾ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ಶಿವಕುಮಾರ್, ದಕ್ಷಿಣ ವಲಯ ಕೇಂದ್ರ ಸಂವಹನ ಇಲಾಖೆ, ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಮಹಾನಿರ್ದೇಶಕ ಎಸ್.ವೆಂಕಟೇಶ್ವರ, ಕರ್ನಾಟಕ ವಲಯ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಹೆಚ್ಚುವರಿ ಮಹಾನಿರ್ದೇಶಕ ಎಸ್.ಜಿ.ರವೀಂದ್ರ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ನಗರ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತರೆಡ್ಡಿ, ಜಿಪಂ ಸಿಇಒ ಬಿ.ಆರ್.ಪೂರ್ಣಿಮಾ, ನಗರಪಾಲಿಕೆ ಸದಸ್ಯರಾದ ಪ್ರಮೀಳಾ ಭರತ್, ಎಂ.ಶಿವಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net