

ಮೈಸೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 202 ಯೋಜನೆಗಳನ್ನು ಜಾರಿಗೊಳಿಸಿದ್ದು, ಈ ಪೈಕಿ 42 ಯೋಜನೆಗಳು ಮಹಿಳೆಯರಿಗಾಗಿಯೇ ರೂಪಿಸಲಾಗಿದೆ ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದರು.
ನಗರದ ವಿದ್ಯಾರಣ್ಯಪುರಂನ ನಿತ್ಯಾನಂದ ಕಲ್ಯಾಣ ಮಂದಿರದಲ್ಲಿ ಮಂಗಳವಾರ ಬಿಜೆಪಿ ನಗರ ಮಹಿಳಾ ಮೋರ್ಚಾ ಹಮ್ಮಿಕೊಂಡಿದ್ದ ನಗರ ಮಹಿಳಾ ಮೋರ್ಚಾ ಸಮಾವೇಶ ಉದ್ಘಾಟಿಸಿ ಮಾತನಾಡಿ, ಕೇಂದ್ರ ಸರ್ಕಾರ ಮಹಿಳೆಯರಿಗೆ ಜಾರಿಗೊಳಿಸಿದ ಯೋಜನೆಗಳು ಹಾಗೂ ಅದರಿಂದ ಮಹಿಳೆಯರಿಗೆ ಆಗಿರುವ ಪ್ರಯೋಜನಗಳ ಕುರಿತು ಬಿಜೆಪಿ ಮಹಿಳಾ ಕಾರ್ಯಕರ್ತರು ಪ್ರತಿಯೊಂದು ಮತದಾ ರರಿಗೆ ತಿಳಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.
ನಗರದ 4 ಕ್ಷೇತ್ರಗಳಲ್ಲೂ ಈ ಬಾರಿ ಬಿಜೆಪಿ ಗೆಲುವು ಸಾಧಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ವದ ಯೋಜನೆಗಳ ಕುರಿತು ಜನರಿಗೆ ತಿಳಿಸುವ ಕಾರ್ಯ ಆಗಬೇಕು. ಪ್ರಧಾನಮಂತ್ರಿ ಅವಾಜ್ ಯೋಜನೆಯಡಿ ಕೆ.ಆರ್.ಕ್ಷೇತ್ರದಲ್ಲಿ 10 ಸಾವಿರ ಮನೆಗಳನ್ನು ನೀಡಲಾಗಿದ್ದು, ಈ ಪೈಕಿ 5200 ಮನೆಗಳನ್ನು ಮಹಿಳೆಯರ ಹೆಸರಲ್ಲಿಯೇ ನೀಡಿರುವುದು ವಿಶೇಷ. ಮಾತೃ ವಂದನಾ ಯೋಜನೆಯಡಿ 9,200 ಗರ್ಭಿಣಿಯರಿಗೆ ಅವರ ಖಾತೆಗೆ 5 ಸಾವಿರ ರೂ. ಹಾಕಲಾಗಿದೆ. ಮುಸ್ಲಿಂ ಮತ್ತು ಕ್ರೈಸ್ತ ಮಹಿಳೆಯರು ಸಹ ಈ ಯೋಜನೆ ಸೌಲಭ್ಯ ಪಡೆದುಕೊಂಡಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದು, ಅವರ ಸುಳ್ಳು ಭರವಸೆ ಗಳಿಗೆ ಯಾರು ಮರುಳಾಗಬಾರದು. ಮಹಿಳೆಯರ ಖಾತೆಗೆ ಹಣ ಹಾಕುವ ಭರವಸೆಯನ್ನು ಕಾಂಗ್ರೆಸ್ ನೀಡುತ್ತಿದೆ. ಇಂತಹ ಭರವಸೆಗಳನ್ನು ಮಹಿಳೆಯರು ನಂಬಬಾರದು. ಮಹಿಳೆಯರು ದೇಶಾಭಿವೃದ್ಧಿಯಲ್ಲಿ ಭಾಗಿಯಾಗಬೇಕು, ಸ್ವಾವಲಂಬಿಗಳಾಗಿ ದೇಶದ ಅಭಿವೃದ್ಧಿಗೆ ಒತ್ತು ನೀಡಬೇಕು ಎಂಬ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನಪರ ಯೋಜನೆಗಳನ್ನು ಜಾರಿಗೆ ತಂದಿವೆ ಎಂದರು.
ಶಾಸಕ ಎಲ್.ನಾಗೇಂದ್ರ ಮಾತನಾಡಿ, ಸದ್ಯದಲ್ಲಿಯೇ ವಿಧಾನಸಭಾ ಚುನಾವಣೆ ಎದುರಾಗಲಿದೆ. ಅದಾದ ನಂತರ ನಗರ ಪಾಲಿಕೆ ಚುನಾವಣೆ ಆ ಬಳಿಕ ಲೋಕಭಾ ಚುನಾವಣೆ ಬರಲಿದೆ. ಇದು ಚುನಾವಣಾ ವರ್ಷವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಯೊಂದು ಚುನಾವಣೆ ಎದುರಿಸಲು ಸಜ್ಜಾಗಬೇಕು ಎಂದು ಕರೆ ನೀಡಿದರು.