

ಚಿತ್ರದುರ್ಗ: ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಹೆಸರು ಜಪಿಸುವ ಬದಲು ದೇವರ ಸ್ಮರಣೆ ಮಾಡಿದ್ದರೆ ಸ್ವರ್ಗ ಪ್ರಾಪ್ತಿ ಆಗುತ್ತಿತ್ತು ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್‌ಷಾ ವಿರುದ್ಧ ಸಾಮಾಜಿಕ ಸಂಘರ್ಷ ಸಮಿತಿ ಸದಸ್ಯರು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಇದಕ್ಕೂ ಮುನ್ನ ಪ್ರವಾಸಿ ಮಂದಿರದಿಂದ ಡಿಸಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಅಮಿತ್‌ಷಾ ರಾಜಿನಾಮೆಗೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಪ್ರೊ.ಸಿ.ಕೆ.ಮಹೇಶ್, ದೇಶದ ಏಕತೆಗೆ ಪೆಟ್ಟು ಕೊಡುವಂಥ ಮಾತುಗಳನ್ನಾಡಿರುವ ಅಮಿತ್ ಷಾ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಶೋಷಿತರು, ಮಹಿಳೆಯರನ್ನು ದಿಕ್ಕುತಪ್ಪಿಸಲು ಹೊರಟಿದ್ದಾರೆ. ಬ್ರಾಹ್ಮಣ್ಯ ಆಳ್ವಿಕೆ ಕಾಲದಲ್ಲಿ ದೇಶ ವಿಭಜನೆಯಾಯಿತು. ಈಗ ಮತ್ತೊಮ್ಮೆ ಅಂತಹ ಆಳ್ವಿಕೆ ಆರಂಭವಾಗುವ ವಾತಾವರಣವಿದೆ. ಅಖಂಡ ಭಾರತ ಉಳಿಯಬೇಕಾದರೆ ಎಲ್ಲರೂ ಒಗ್ಗೂಡಬೇಕಿದೆ ಎಂದರು.
ಅಮಿತ್‌ಷಾ ಹೇಳಿಕೆ ದೇವರು, ಧರ್ಮದ ಹೆಸರಿನಲ್ಲಿ ಹೊಸ ಚಿಂತನೆ, ಚಳವಳಿಗೆ ಬುನಾದಿ ತೋಡಿದಂತೆ ಕಾಣುತ್ತಿದೆ. ಕಾಂಗ್ರೆಸ್ ಅಂ ಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿತು ಎಂದು ಕೋಮುವಾದಿ ಬಿಜೆಪಿ ಅಪಪ್ರಚಾರದಲ್ಲಿ ತೊಡಗಿರುವುದರ ವಿರುದ್ಧ ದಲಿ ತರು ಜಾಗೃತರಾಗಬೇಕಿದೆ. ಬ್ರಾಹ್ಮಣ್ಯದ ವಿರುದ್ಧ ಹೋರಾಟ ನಡೆಸಬೇಕಾಗಿದೆ ಎಂದರು.
ಸಾಮಾಜಿಕ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಕೆ. ಕುಮಾರ್, ಪ್ರಧಾನ ಕಾರ್ಯದರ್ಶಿ ಸಿ.ಎ. ಚಿಕ್ಕಣ್ಣ, ಡಿ.ದುರುಗೇಶ್, ಎಂ. ರಾಮಾಂಜನೇಯ, ಆರ್. ರಾಮಲಿಂಗಪ್ಪ, ಕೆ. ಕೃಷ್ಣಮೂರ್ತಿ, ಡಿ. ಯಲ್ಲಪ್ಪ, ಹೊಳೆಯಪ್ಪ, ಹನುಮಂತಪ್ಪ ದುರ್ಗ, ವಕೀಲರಾದ ಡಿ. ವೆಂಕಟೇಶ್, ಎಲ್. ಸುರೇಶ್, ದಲಿತ ಮುಖಂಡ ಬಿ. ರಾಜಣ್ಣ, ಟಿ. ಕೆಂಚಪ್ಪ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.