

ಮೂಡಿಗೆರೆ: ತೈಲ ಮತ್ತು ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಸೈಕಲ್ ಜಾಥಾ ನಡೆಸಿ ಲಯನ್ಸ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಮಾತನಾಡಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ದಾಖಲೆ ಮಟ್ಟದಲ್ಲಿ ಕುಸಿತವಾದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಡೀಸೆಲ್, ಪೆಟ್ರೋಲ್ ಮತ್ತು ಅಡುಗೆ ಅನಿಲದ ಬೆಲೆಯನ್ನು ಪ್ರತಿದಿನ ಏರಿಕೆ ಮಾಡುವ ಮೂಲಕ ಜನರ ಸುಲಿಗೆ ಮಾಡುತ್ತಿವೆ ಎಂದು ದೂರಿದರು.
ಪ್ರಪಂಚದ ಯಾವ ದೇಶಗಳಲ್ಲೂ ಅಲ್ಲಿನ ಸರ್ಕಾರಗಳು ತೈಲ ಮತ್ತು ಅಡುಗೆ ಅನಿಲದ ಬೆಲೆ ಹೆಚ್ಚಿಸಿಲ್ಲ. ಆದರೆ ಕೇಂದ್ರವು ಹಿಂದಿನ ಕಾಂಗ್ರೆಸ್ ಸರ್ಕಾರ ಮಾಡಿದ ಸಾಲ ತೀರಿಸುವುದಾಗಿ ಸುಳ್ಳು ಹೇಳಿ ಬೆಲೆ ಏರಿಕೆ ಮಾಡಿ ಜನರನ್ನು ನಂಬಿಸಲು ಹೊರಟಿದೆ. ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಬೆಲೆ ಏರಿಕೆ ನಿಯಂತ್ರಿಸಲು ಕೇಂದ್ರೀಯ ಉನ್ನತ ಮಟ್ಟದ ಸಮಿತಿ ಬೆಲೆ ಏರಿಕೆಗೆ ಕಡಿವಾಣ ಹಾಕುವ ಕೆಲಸ ಮಾಡುತ್ತಿತ್ತು. ಈಗಿನ ಸರ್ಕಾರ ಬೆಲೆ ಏರಿಕೆಗೆ ಸಮಿತಿ ರಚಿಸಿದೆಯೇ ಹೊರತು ಇಳಿಕೆಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತನ್ನ ಕ್ಷೇತ್ರದಲ್ಲಿ 2 ಬಾರಿ ಜಯಗಳಿಸಿದರೂ ಕೆಲಸ ಮಾಡದೆ ಸುಳ್ಳುಗಳ ಸರಮಾಲೆ ಹಾಕಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಯಾವುದೇ ಕ್ಷೇತ್ರದ ಜನಪ್ರತಿನಿಧಿಗಳು ಮಂತ್ರಿಯಾದರೆ ಅಲ್ಲಿನ ಜನ ಪಕ್ಷಭೇದ ಮರೆತು ಅಭಿನಂದಿಸುತ್ತಾರೆ. ಉಡುಪಿ-ಚಿಕ್ಕಮಗಳೂರಿನ ಜನ ಅವರಿಗೆ ಮಂತ್ರಿ ಸ್ಥಾನ ದೊರೆತಾಗಲೂ ಉತ್ತಮ ಪ್ರತಿಕ್ರಿಯೆ ನೀಡುತ್ತಿಲ್ಲ. ಆದರೂ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತನೆ ಎಂದು ವ್ಯಂಗ್ಯವಾಡಿದರು.