ಕೇಂದ್ರ, ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಜಾಗೃತಿ ಮೂಡಿಸಿ

27CBP5(congress)
Published on

ಚಿಕ್ಕಬಳ್ಳಾಪುರ : ಕೇಂದ್ರ ಹಾಗೂ ರಾಜ್ಯಸರ್ಕಾರದ ಜನ ವಿರೋಧಿ ನೀತಿಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಂತೆ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಉದಯ್ ಶಂಕರ್ ಕಾರ್ಯಕರ್ತರಿಗೆ ಸಲಹೆ ನೀಡಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪದಗ್ರಹಣದ ಹಿನ್ನೆಲೆಯಲ್ಲಿ ಶನಿವಾರ ನಗರದ ವಿನಯ್ ಸಮುದಾಯ ಭವನದಲ್ಲಿ ಪೂರ್ವಭಾವಿ ಸಭೆ ನಡೆಸಿದ ಅವರು, ಕರೊನಾ ಸಂಕಷ್ಟದ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಜನರ ಹಿತ ಕಡೆಗಣಿಸಿವೆ. ಸಂಕಷ್ಟಕ್ಕೆ ಸಮರ್ಪಕವಾಗಿ ಸ್ಪಂದಿಸುವಲ್ಲಿ ವಿಫಲವಾಗಿದ್ದು ಇವುಗಳ ಬಗ್ಗೆ ಸಮರ್ಪಕವಾಗಿ ಮನೆ ಮನೆಗೂ ತಿಳಿಸಬೇಕು ಎಂದು ತಿಳಿಸಿದರು.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೋಟ್ಯಂತರ ರೂ.ಜನರು ನಷ್ಟ ಅನುಭವಿಸಿದ್ದಾರೆ. ಇದರ ನಡುವೆ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಆದರೂ ಆಡಳಿತ ನಡೆಸುತ್ತಿರುವ ಸರ್ಕಾರಗಳು ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಕಿಡಿಕಾರಿದರು.

ಕೆಪಿಸಿಸಿ ನೂತನ ಅಧ್ಯಕ್ಷರ ನೇತೃತ್ವದಲ್ಲಿ ಪಕ್ಷವನ್ನು ಪ್ರಬಲವಾಗಿ ಸಂಘಟಿಸಲಾಗುತ್ತಿದೆ. ಜನಪರ ಹೋರಾಟಗಳ ಮೂಲಕ ಸರ್ಕಾರದ ಕಣ್ಣು ತೆರೆಸಲಿದ್ದು ಕಾರ್ಯಕರ್ತರು ಕೈ ಜೋಡಿಸುವಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಮನವಿ ಮಾಡಿದರು.

ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ, ಜಿಲ್ಲಾ ಉಸ್ತುವಾರಿ ಕವಿತಾ ರೆಡ್ಡಿ, ಕೆಪಿಸಿಸಿ ಸದಸ್ಯ ಎಸ್.ಪಿ.ಶ್ರೀನಿವಾಸ್, ಜಿಪಂ ಸದಸ್ಯ ಪಿ.ಎನ್.ಪ್ರಕಾಶ್, ತಾಪಂ ಸದಸ್ಯ ಸುಬ್ಬರಾಯಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಮಕೃಷ್ಣಪ್ಪ, ಜಯರಾಂ, ಮುಖಂಡರಾದ ಕೆ.ವಿ.ನವೀನ್ ಕಿರಣ್, ಯಲುವಹಳ್ಳಿ ಎನ್.ರಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net