

ಸಿರಗುಪ್ಪ: ಬಳ್ಳಾರಿಯಿಂದ ಲಿಂಗಸೂಗೂರಿಗೆ ಬ್ರಾಡ್‌ಗೇಜ್ ರೈಲು ಮಾರ್ಗದ ನಿರ್ಮಾಣಕ್ಕಾಗಿ ದೆಹಲಿಗೆ ತೆರಳಿ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಬೇಕು. ಇದಕ್ಕಾಗಿ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಕರ್ನಾಟಕ ರೈಲ್ವೆ ಕ್ರಿಯಾ ಸಮಿತಿ ಅಧ್ಯಕ್ಷ ಮಹೇಶ್ವರಯ್ಯಸ್ವಾಮಿ ತಿಳಿಸಿದರು.
ಪಟ್ಟಣದ ಶ್ರೀಶೈಲ ಶಿವಶಕ್ತಿ ಸಾಂಸ್ಕೃತಿಕ ಭವನದಲ್ಲಿ ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯಿಂದ ಆಯೋಜಿಸಿದ್ದ ತಾಲೂಕಿನ ಜನಪ್ರತಿನಿಧಿಗಳು ಮತ್ತು ವಿವಿಧ ಸಂಘ-ಸಂಸ್ಥೆ ಪದಾಧಿಕಾರಿಗಳು, ಪ್ರಮುಖರ ಸಭೆಯಲ್ಲಿ ಮಾತನಾಡಿದರು. 2013 ರಲ್ಲಿ ರೈಲ್ವೆ ಮಂತ್ರಿಯಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಲಿಂಗಸುಗೂರು-ಸಿಂಧನೂರು-ಸಿರಗುಪ್ಪ-ಬಳ್ಳಾರಿಗೆ ಬ್ರಾಡ್‌ಗೇಜ್ ಮಾರ್ಗದ ಸರ್ವೇಯ ಪ್ರಸ್ತಾವನೆಯನ್ನು ರೈಲ್ವೆ ಬಜೆಟ್‌ನಲ್ಲಿ ಮಂಡಿಸಿದ್ದರು. ಆದರೆ ಇಲ್ಲಿವರೆಗೆ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಹೇಳಿದರು.
2014ರಲ್ಲಿ ರೈಲ್ವೆ ಮಂತ್ರಿ ಸದಾನಂದ ಗೌಡ ಅವರು ಗಬ್ಬೂರು-ಸಿಂಧನೂರು-ಸಿರಗುಪ್ಪ-ಬಳ್ಳಾರಿ ಬ್ರಾಡ್‌ಗೇಜ್ ಮಾರ್ಗದ ಸರ್ವೇ ಪ್ರಸ್ತಾವನೆಯನ್ನು ಬಜೆಟ್‌ನಲ್ಲಿ ಪ್ರಕಟಿಸಿದ್ದರು. ಈ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಸಂಸತ್ತಿನ ಅಧಿವೇಶನ ನಡೆದಿರುವುದರಿಂದ ನಿಯೋಗದಲ್ಲಿ ತೆರಳಿ ರೈಲ್ವೆ ಮಂತ್ರಿ ಅಶ್ವಿನಿ ವೈಷ್ಣವ್ ಮತ್ತು ರಾಜ್ಯ ಸಚಿವ ವಿ.ಸೋಮಣ್ಣಗೆ ಮನವಿ ಸಲ್ಲಿಸಬೇಕು ಎಂದು ತಿಳಿಸಿದರು.
ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ, ವಾಲ್ಮೀಕಿ ವಿದ್ಯಾಭಿವೃದ್ದಿ ಟ್ರಸ್ಟ್ ಅಧ್ಯಕ್ಷ ಬಿ.ಎಂ.ಸತೀಶ್, ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಸ್.ಆನಂದ, ಅಕ್ಕಿಗಿರಿಣಿ ಮಾಲೀಕರ ಸಂಘದ ಅಧ್ಯಕ್ಷ ಎನ್.ಜಿ.ಬಸವರಾಜಪ್ಪ, ವಕೀಲರ ಸಂಘದ ಅಧ್ಯಕ್ಷ ಉಪ್ಪಾರ ವೆಂಕೋಬ, ನಗರಸಭೆ ಮಾಜಿ ಅಧ್ಯಕ್ಷ ವೆಂಕಟರಾಮರೆಡ್ಡಿ ಇತರರಿದ್ದರು.