

ಚಿತ್ರದುರ್ಗ: ಕೇಂದ್ರ-ರಾಜ್ಯ ಸರ್ಕಾರ ರೈತರ ಪರವಿಲ್ಲ. ನಾವೆಲ್ಲ ಒಗ್ಗೂಡಿ ಹೋರಾಟ ನಡೆಸಿದಾಗ ಮಾತ್ರ ನ್ಯಾಯಯುತ ಬೇಡಿಕೆ ಈಡೇರಲು ಸಾಧ್ಯ ಎಂದು ಅಖಂಡ ಕರ್ನಾಟಕ ರೈತ ಸಂಘದ ಅಧ್ಯಕ್ಷ ಸಿದ್ದನಗೌಡ ಪಾಟೀಲ್ ಸಲಹೆ ನೀಡಿದರು.
ಎಪಿಎಂಸಿ ರೈತ ಭವನದಲ್ಲಿ ಗುರುವಾರ ನಡೆದ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ರೈತ ಚಳವಳಿ ಗಟ್ಟಿಯಾಗಿವೆ ಎಂಬುದಕ್ಕೆ ದೆಹಲಿ ಚಲೋ, ಬೆಳಗಾವಿ ಸುವರ್ಣಸೌಧದ ಮುಂದೆ ನಡೆದ ಚಳವಳಿ ನಿದರ್ಶನವಾಗಿವೆ ಎಂದರು.
ರಾಜ್ಯದಲ್ಲಿ 4 ಲಕ್ಷ ಪಂಪ್‌ಸೆಟ್‌ಗಳಿವೆ. ರೈತರ ಜಮೀನುಗಳಲ್ಲಿ ಪರಿವರ್ತಕ ಸುಟ್ಟರೆ ಈ ಹಿಂದೆ ಸರ್ಕಾರ ಉಚಿತವಾಗಿ ನೀಡುತ್ತಿತ್ತು. ಆದರೀಗ ರೈತರೆ ದುರಸ್ತಿ ಮಾಡಿಸಿಕೊಳ್ಳಬೇಕೆಂಬ ಕಾನೂನು ಜಾರಿಗೊಳಿಸಿದೆ. ಸ್ಪಿಂಕ್ಲರ್ ಸೆಟ್‌ಗೆ 4 ಸಾವಿರ ರೂ. ನಿಗದಿಪಡಿಸಿದೆ. ಮೊದಲೇ ಬರದಿಂದ ಬೆಂದಿರುವ ರೈತರ ಮೇಲೆ ಬರೆ ಎಳೆಯಲು ಮುಂದಾಗಿದೆ ಎಂದು ದೂರಿದರು.
ಕೇಂದ್ರ-ರಾಜ್ಯ ಸರ್ಕಾರದ ತಿಕ್ಕಾಟದಲ್ಲಿ ರೈತರು ಹೈರಾಣಾಗಿದ್ದಾರೆ. ಆದ್ದರಿಂದ ನಾವೆಲ್ಲ ಸಣ್ಣ-ಪುಟ್ಟ ಭಿನ್ನಾಭಿಪ್ರಾಯ ಬದಿಗಿಟ್ಟು ಒಂದಾಗಬೇಕು. ಬೆಳೆ ಪರಿಹಾರ, ವಿಮೆ ಇನ್ನೂ ರೈತರ ಕೈಸೇರಿಲ್ಲ. ರೈತ ವರನಿಗೆ ವಧು ಸಿಗುತ್ತಿಲ್ಲ. ಅದಕ್ಕಾಗಿ ಕನ್ಯಾ ಭಾಗ್ಯ ಹೆಸರಿನಡಿ ವಿವಾಹವಾಗುವ ಹೆಣ್ಣಿನ ಖಾತೆಗೆ 5 ಲಕ್ಷ ರೂ. ಠೇವಣಿ ಇಡುವಂತ ಯೋಜನೆಯನ್ನು ಮತ್ತೊಂದು ಗ್ಯಾರಂಟಿಯೊಂದಿಗೆ ಸರ್ಕಾರ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಕಾರ್ಯಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಹೊಸ ಸಮಿತಿ ರಚಿಸಿ ಬಲಪಡಿಸಬೇಕಿದೆ. ಯಾವ ರೈತರಿಗೂ ಅನ್ಯಾಯವಾಗದಂತೆ, ಸರ್ಕಾರ ಬೇಡಿಕೆಗೆ ಸ್ಪಂದಿಸುವವರೆಗೂ ಹೋರಾಡೋಣ ಎಂದು ಸಲಹೆ ನೀಡಿದರು.
ಸಂಘದ ಜಿಲ್ಲಾಧ್ಯಕ್ಷ ಎಲ್.ಬಸವರಾಜಪ್ಪ ಅಳಗವಾಡಿ, ಗೌರವಾಧ್ಯಕ್ಷ ಜೆ.ಮೇಘರಾಜ್ ಹಳಿಯೂರು, ಕುರುಬರಹಳ್ಳಿ ಶಿವಣ್ಣ, ಬಸ್ತಿಹಳ್ಳಿ ನಾರಪ್ಪ, ಎಂ.ಸಿದ್ದಪ್ಪ ಹಳಿಯೂರು, ಎಸ್.ಎಂ.ಶಿವಕುಮಾರ್, ಎನ್.ಜಿ.ಷಣ್ಮುಖಪ್ಪ, ಜಿ.ಪರಮೇಶ್ವರಪ್ಪ, ಗೌಡ್ರು ಪರಮಶಿವಣ್ಣ, ಸತೀಶ್‌ರೆಡ್ಡಿ, ಮೈಸೂರಿನ ನಿಂಗಮ್ಮ ಇತರರಿದ್ದರು.