ಕೇಂದ್ರ ಬಜೆಟ್‌ನಲ್ಲಿ ಅಕ್ಷರ, ಅನ್ನ, ಆರೋಗ್ಯ ಕಡೆಗಣನೆ: ಎಚ್. ವಿಶ್ವನಾಥ್ ಅಸಮಾಧಾನ

VISHWANATH
Published on

ಮೈಸೂರು: ಅಕ್ಷರ, ಅನ್ನ, ಆರೋಗ್ಯವನ್ನು ಕೇಂದ್ರ ಬಜೆಟ್‌ನಲ್ಲಿ ಕಡೆಗಣಿಸಲಾಗಿದೆ. ವಿಮಾನ ನಿಲ್ದಾಣಕ್ಕಿಂತ ನಮಗೆ ಅಕ್ಷರ, ಅನ್ನ, ಆರೋಗ್ಯ ಅವಶ್ಯಕ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದರು.

ಮೋದಿ ಸರ್ಕಾರಕ್ಕೆ ಜನರ ಕಷ್ಟ ಅರ್ಥವಾಗಿಲ್ಲ, ದೇಶ ಎಲ್ಲ ಕ್ಷೇತ್ರಗಳಲ್ಲೂ ಹಿಂದುಳಿಯುತ್ತಿದೆ. ದೇಶಕ್ಕೆ ಮೂಲಭೂತವಾಗಿ ಏನೂ ಬೇಕಿದೆ ಎಂಬುದೇ ಕೇಂದ್ರ ಸರ್ಕಾರಕ್ಕೆ ಅರ್ಥವಾಗಿಲ್ಲ. ಸರ್ಕಾರ ಕೇವಲ ಉಳ್ಳವರ ಪರವಾಗಿ ಇದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಭದ್ರಾವತಿಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ಮುಚ್ಚಲು ಸರ್ಕಾರ ಹೊರಟಿದೆ. ಭದ್ರಾವತಿ ಕಾರ್ಖಾನೆ ಲಾಭದಲ್ಲಿದ್ದರೂ ಮುಚ್ಚುವ ಅವಶ್ಯಕತೆ ಏನಿತ್ತು? ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಏನು ಮಾಡುತ್ತಿದ್ದೀರಿ? ಆ ಭಾಗದ ಸಂಸದರು, ಶಾಸಕರು ಏಕೆ ಸುಮ್ಮನಿದ್ದೀರಿ? ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಸೇರಿಕೊಂಡು ರಾಜ್ಯದ ಎಲ್ಲ ಆಸ್ತಿಗಳನ್ನು ಒಂದೊಂದಾಗಿ ಗುಜರಾತ್ ಮಾರ್ವಾಡಿಗಳಿಗೆ ಕೊಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭದ್ರಾವತಿ ವಿಧಾನಸಭೆ ಕ್ಷೇತ್ರದಲ್ಲಿ ಇದುವರೆಗೂ ಒಮ್ಮೆಯೂ ಬಿಜೆಪಿ ಗೆದ್ದಿಲ್ಲ, ಹಾಗಾಗಿ ಭದ್ರಾವತಿ ಕಂಡರೆ ಬಿಜೆಪಿಯವರಿಗೆ ಆಗುವುದಿಲ್ಲ. ಮೋದಿ, ಅಮಿತ್ ಷಾ ಬಂದಾಗ ಶಿವಮೊಗ್ಗದ ಜನರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿ ಈ ಬಗ್ಗೆ ಪ್ರಶ್ನೆ ಮಾಡ ಬೇಕು. ರಾಜ್ಯದ ಆಸ್ತಿಗಳನ್ನು ಮಾರಾಟ ಮಾಡುವುದಕೋಸ್ಕರನಾ ರಾಜ್ಯದಲ್ಲಿ 25 ಬಿಜೆಪಿ ಎಂಪಿಗಳನ್ನು ರಾಜ್ಯದ ಜನರು ಆಯ್ಕೆ ಮಾಡಿದ್ದು ಎಂದು ಪ್ರಶ್ನಿಸಿದರು.

ರಾಜ್ಯ ರಾಜಕಾರಣದಲ್ಲಿ ಸಿಡಿ ವಿಚಾರವಾಗಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಸಿಡಿ ಬಿಡುಗಡೆ ಅನ್ನುವುದೇ ತಪ್ಪು. ಅಧಿಕಾರದಲ್ಲಿದ್ದಾಗ ನೀನು ಏನೂ ಕೆಲಸ ಮಾಡಿದೆ, ಏನು ಮಾಡಿಲ್ಲ ಎಂಬುದನ್ನು ಪ್ರಶ್ನಿಸಬೇಕು. ನೀನು ಎಲ್ಲೆಲ್ಲಿ ಮಲಗಿದ್ದೆ ಅನ್ನೋದನ್ನು ಸಿಡಿ ಮಾಡಿ ಬಿಡುಗಡೆ ಮಾಡುತ್ತೇನೆ ಅನ್ನೋದು ಮೂರ್ಖತನ. ಈ ರೀತಿ ಸಿಡಿ ಬಿಡುಗಡೆ ಮಾಡುತ್ತೇನೆ ಅನ್ನುವವರು ಶತಮೂರ್ಖರು. ಸಿಡಿ ವಿಚಾರದ ಚರ್ಚೆ ರಾಜಕಾರಣಕ್ಕೆ ಒಳ್ಳೆಯದಲ್ಲ. ಎಲ್ಲರಿಗೂ ಅವರದೆ ಆದ ವೈಯಕ್ತಿಕ ಗೌಪ್ಯ ಬದುಕು ಇರುತ್ತದೆ. ಅದನ್ನು ಬಿಡುಗಡೆ ಮಾಡುತ್ತೇನೆ ಅನ್ನೋದು ತಪ್ಪು ಎಂದರು.

ನನ್ನ ರಕ್ತದ ಕಣ ಕಣದಲ್ಲೂ ಕಾಂಗ್ರೆಸ್ ಇದೆ. ಕಾಲಕ್ಕೆ ಅನುಗಣವಾಗಿ ನಾನು ಹಿಡಿದ ಧ್ವಜ ಬದಲಾಗಿರಬಹುದು. ಆದರೆ, ತತ್ವ, ಸಿದ್ಧಾಂತ ಬದಲಾಗಿಲ್ಲ. ನಾನು ಬಿಜೆಪಿಯಿಂದ ಹಣ ಪಡೆದು ಪಕ್ಷ ಸೇರ್ಪಡೆಯಾಗಿಲ್ಲ. ಬಿಜೆಪಿಯಿಂದ ಹಣ ಪಡೆದಿದ್ದೇ ಆಗಿದ್ದಲ್ಲಿ ಸರ್ಕಾರದ ತಪ್ಪು ಹೇಳಲು ನನಗೆ ಧೈರ್ಯ ಎಲ್ಲಿ ಬರುತಿತ್ತು. ನಾನು ಇಷ್ಟು ವರ್ಷ ರಾಜಕಾರಣದಲ್ಲಿದ್ದರು ಇನ್ನೂ ಚಿಕ್ಕ ಮನೆಯಲ್ಲಿಯೇ ಇದ್ದೇನೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net