ಕೇಂದ್ರ ಬಜೆಟ್ ರಾಜ್ಯಕ್ಕೆ ಅನ್ಯಾಯವಾಗಿಲ್ಲ: ಎಚ್ಡಿಕೆ

hdk
Published on

ಮೈಸೂರು: ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡಿಲ್ಲ. ಆದರೆ, ರಾಜ್ಯ ಸರ್ಕಾರವು ಜನರ ಮುಂದೆ ಅಪಪ್ರಚಾರ ಮಾಡಿ ಸುಳ್ಳಿನ ಕಂತೆಯನ್ನೇ ಬಿಚ್ಚಿಡುತ್ತಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ದೂರಿದರು.

ಹಿಂದಿನಂತೆ ಈ ಸಲವೂ ಇಲಾಖಾವಾರು ಪ್ರತಿ ರಾಜ್ಯಗಳಿಗೂ ಹಣ ಹಂಚಿಕೆಯಾಗಿದೆ. ಇದು ಕಾಂಗ್ರೆಸ್ ಸರ್ಕಾರ ಇದ್ದಾಗಿನಿಂದಲೂ ಮುಂದುವರಿದುಕೊಂಡು ಬಂದಿದೆ. ನರೇಂದ್ರ ಮೋದಿ ಪ್ರಧಾನಿಯಾದ ಮೇಲೇನೂ ಆಗಿದ್ದಲ್ಲ. ತಾರತಮ್ಯವನ್ನೇನೂ ಮಾಡಿಲ್ಲ ಎಂದರು.

ಕೇಂದ್ರವು ರಾಜ್ಯಕ್ಕೆ ಕೊಡದೆ ಇಲ್ಲಿ ಸರ್ಕಾರ ನಡೆಯುತ್ತಿದೆಯೇ? ಹಣಕಾಸು ಆಯೋಗದ ಶಿಫಾರಸಿನ ಅನ್ವಯ, ಮಾರ್ಗಸೂಚಿ ಪ್ರಕಾರ ಹಾಗೂ ಇಲ್ಲಿಯವರೆಗೆ ನಡೆದಿರುವಂತೆಯೇ ಈಗಲೂ ಆಗಿದೆ. ಈ ವಿಷಯದಲ್ಲಿ ತಪ್ಪಾಗಿದ್ದರೆ ಯುಪಿಎ ಸರ್ಕಾರದಲ್ಲಿ ಏಕೆ ಬದಲಾವಣೆ ಮಾಡಲಿಲ್ಲ? ಎಂದೂ ಪ್ರಶ್ನಿಸಿದರು.

ರಾಜ್ಯ ಸರ್ಕಾರದಲ್ಲಿ ಈವರೆಗೆ ಎಷ್ಟು ಆರ್ಥಿಕ ಪ್ರಗತಿಯಾಗಿದೆ ಎಂಬುದನ್ನು ಸಿಎಂ ಬಹಿರಂಗಪಡಿಸಲಿ. ನನಗೆ ಗೊತ್ತಿರುವ ಪ್ರಕಾರ ಶೇ.62ರಷ್ಟು ಮಾತ್ರ ಪ್ರಗತಿಯಾಗಿದೆ. ಉಳಿದ ಒಂದು 1 ತಿಂಗಳು ನೂರರಷ್ಟು ಪ್ರಗತಿ ಸಾಧಿಸಲು ಸಾಧ್ಯವೇ? ಈ ಸರ್ಕಾರದಲ್ಲಿ ಆರ್ಥಿಕ ಸದೃಢತೆ ಎಲ್ಲಿದೆ? ಜನರ ಮೇಲೆ ತೆರಿಗೆ ವಿಧಿಸಿ ಖಜಾನೆ ತುಂಬಿಸಿಕೊಳ್ಳಲಾಗುತ್ತಿದೆ. ಇತರ ರಾಜ್ಯಗಳಲ್ಲೂ ಮೆಟ್ರೊ ರೈಲಿದೆ. ಅಲ್ಲೇಕೆ, ಪ್ರಯಾಣ ದರ ಏರಿಸಿಲ್ಲ? ಕರ್ನಾಟಕದಲ್ಲಷ್ಟೇ ಹೆಚ್ಚಾಯಿತೇಕೆ? ಇವರೇ ಶಿಫಾರಸು ಮಾಡಿದ್ದರಿಂದ ದರ ಏರಿಕೆಯಾಗಿದೆ ಎಂದು ಕಿಡಿಕಾರಿದರು.

ಬಸ್ ಪ್ರಯಾಣ ದರ ಹೆಚ್ಚಿಸಿಯಾಗಿದೆ. ಇದೀಗ ಹಾಲಿನ ದರ, ನೀರಿನ ದರವನ್ನು ಏರಿಸುತ್ತಾರಂತೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಎಲ್ಲಿ ನಡೆಯುತ್ತಿದೆ. ಯಾವ ಕಾರ್ಯಕ್ರಮಕ್ಕೆ ಹಣ ಕೊಟ್ಟಿದ್ದಾರೆ? ನೀವು ಆರ್ಥಿಕವಾಗಿ ಅಷ್ಟೊಂದು ಶಕ್ತವಾಗಿದ್ದರೆ, ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪ್ರತಿ ತಿಂಗಳೂ ನೀಡಲು ಏಕೆ ಆಗುತ್ತಿಲ್ಲ? ಇಷ್ಟು ತೆರಿಗೆ, ದರ ಏರಿಕೆ ಮಾಡಿದರೆ ನಾನು 2000 ರೂ. ಬದಲಿಗೆ ಮಹಿಳೆಯರಿಗೆ 10 ಸಾವಿರ ರೂ. ಕೊಡುತ್ತೇನೆ ಎಂದರು.

ಮುಡಾವನ್ನು ಆ ದೇವರೇ ಕಾಪಾಡಬೇಕು

ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರಿಂದ ತಮಗಿಷ್ಟ ಬಂದಂತೆ ವರದಿಯನ್ನು ಬರೆಸಿಕೊಂಡಿದ್ದಾರೆ. ಬಹಳಷ್ಟು ಪ್ರಕರಣದಲ್ಲಿ ತಪ್ಪು ಮಾಡದ ಅಮಾಯಕರು ಬಲಿಯಾಗುತ್ತಾರೆಯೇ ಹೊರತು ಲೂಟಿ ಹೊಡೆಯುವವರು ಅಲ್ಲ. ಇಲ್ಲಿಯೂ ಅದೇ ಆಗಿದೆ. ಮುಡಾವನ್ನು ಆ ದೇವರೇ ಕಾಪಾಡಬೇಕು ಎಂದು ಹೇಳಿದರು.

40 ವರ್ಷಗಳ ಹಿಂದೆ ನಾನು ಖರೀದಿಸಿದ ಜಮೀನಿನ ಮೇಲೆ ಕಣ್ಣು ಹಾಕಿದ್ದಾರೆ. 5 ಐಎಎಸ್ ಅಧಿಕಾರಿ ಒಳಗೊಂಡ ಎಸ್‌ಐಟಿ ರಚಿಸಿ ಸರ್ವೇ ಮಾಡಿಸುತ್ತಿದ್ದಾರೆ. ಮೂಲ ದಾಖಲೆ ಇಲ್ಲ ಎಂದು ಹೇಳುತ್ತಾರೆ. ಈಗ ಮೂಲ ದಾಖಲೆದಾರರ ಹುಡುಕಾಟ ನಡೆಸಿದ್ದಾರೆ. ಇಂಟರ್‌ನ್ಯಾಷನಲ್ ಸರ್ವೇಯರ್‌ಗಳನ್ನೇ ಕರೆಸಿ ಸಮೀಕ್ಷೆ ಮಾಡಿಸಲಿ, ಅವರನ್ನೇನು ಹಿಡ್ಕೊಂಡಿದ್ದೀನಾ? ಇವರೊಬ್ಬರೇ ಸತ್ಯಹರಿಶ್ಚಂದ್ರರು? ಗೋಮಾಳ ನುಂಗಿರುವುದು ಸೇರಿದಂತೆ ಇವರ ನೂರು ಕರ್ಮಕಾಂಡಗಳ ಬಗ್ಗೆ ದಾಖಲೆ ನೀಡಬಲ್ಲೆ. ಆದರೆ, ಕ್ರಮ ತೆಗೆದುಕೊಳ್ಳುವವರು ಯಾರು? ಎಂದರು.

ಠಾಣೆಗೆ ಕಲ್ಲು ತೂರಿದವರನ್ನು ರಕ್ಷಣೆ ಮಾಡಬೇಕಾ?:

ಮೂಟೆಗಟ್ಟಲೇ ಕಲ್ಲು ತೆಗೆದುಕೊಂಡು ಬಂದು ಉದಯಗಿರಿ ಪೊಲೀಸ್ ಠಾಣೆಗೆ ಹೊಡೆದವರನ್ನು ರಕ್ಷಣೆ ಮಾಡಬೇಕಾ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಪೊಲೀಸ್ ವಾಹನದ ಮೇಲೆ ಕಲ್ಲು ತೂರಿದವರನ್ನು ಬಲಿ ಹಾಕಬೇಕು. ಎಷ್ಟು ದಿನ ಅಂತ ಇದನ್ನೆಲ್ಲ ಸಹಿಸಿಕೊಳ್ಳುತ್ತೀರಿ. ಯಾರನ್ನೋ ಓಲೈಸಲು ಸರ್ಕಾರವಿಲ್ಲ. ಕಾನೂನುಬಾಹಿರ ಚಟುವಟಿಕೆ ನಡೆಸುವವನು ಯಾರೇ ಇರಲಿ ಕ್ರಮ ತೆಗೆದುಕೊಳ್ಳಬೇಕಾದದ್ದು ರಾಜ್ಯ ಸರ್ಕಾರದ ಕರ್ತವ್ಯ. ಇಲ್ಲವಾದರೆ, ಇಂದು ಠಾಣೆಗೆ ಕಲ್ಲು ತೂರಿದ್ದಾರೆ. ಹೀಗೆ ಬಿಟ್ಟರೆ ಪೊಲೀಸರ ಮನೆಗೆ ಕಲ್ಲು ಹೊಡೆಯುತ್ತಾರೆ. ಎಚ್ಚರ ಇರಲಿ ಎಂದು ಎಚ್‌ಡಿಕೆ ಗುಡುಗಿದರು.

ಕುವೆಂಪು ಆಶಯದಂತೆ ರಾಜ್ಯ ಸರ್ವಜನಾಂಗದ ಶಾಂತಿಯ ತೋಟವಾಗಿಯೇ ಉಳಿಯಬೇಕು. ಬಿಜೆಪಿ ಸ್ನೇಹಿತರಿಗೆ ಮನವಿ ಮಾಡಿಕೊಳ್ಳುತ್ತೇನೆ. ಸಮಾಜಕ್ಕೆ ರಕ್ಷಣೆ ನೀಡಬೇಕೆಂದು ಹೋಗುತ್ತೀರಿ. ಮತ್ತೊಂದೆಡೆ ಅವರು ಭದ್ರವಾಗುತ್ತಾ ಹೋಗುತ್ತಾರೆ. ಎರಡೂ ಪಕ್ಷದ ನಾಯಕರಿಗೆ ಮನವಿ ಮಾಡುತ್ತೇನೆ. ರಾಜ್ಯದಲ್ಲಿರುವ ಹಲವು ಜ್ವಲಂತ ಸಮಸ್ಯೆಗಳತ್ತ ಗಮನಹರಿಸಿ ಎಂದರು.

ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಎಚ್‌ಡಿಕೆ, ಈ ಸರ್ಕಾರ ಯಾರಿಗೆ ರಕ್ಷಣೆ ಕೊಡುತ್ತದೆ. ಮಂತ್ರಿಯೊಬ್ಬರು ಮರಾಠಿಯಲ್ಲೇ ಭಾಷಣ ಮಾಡಿ ಸರ್ಟಿಫಿಕೇಟ್ ಕೊಟ್ಟು ಬಂದಿದ್ದಾರೆ. ಇಂತಹವರಿಗೆ ರಕ್ಷಣೆ ಸಿಗಲಿದೆಯೇ ಎಂದು ವಾಗ್ದಾಳಿ ನಡೆಸಿದರು.

ಜಿಟಿಡಿ ವಿರುದ್ಧ ಎಚ್‌ಡಿಕೆ ಕಿಡಿ

ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಜಿ.ಟಿ.ದೇವೇಗೌಡ ವಿರುದ್ಧ ಎಚ್‌ಡಿಕೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.

ಎಲ್ಲದಕ್ಕೂ ಒಂದು ಇತಿಮಿತಿ ಇರುತ್ತದೆ. ನನ್ನಿಂದ ಏನು ತಪ್ಪಾಗಿಲ್ಲ. ಅನ್ಯಾಯವೂ ಆಗಿಲ್ಲ. ಮುಂದಿನದ್ದನ್ನು ಆ ದೇವರು ನೋಡಿಕೊಳ್ಳುತ್ತಾನೆ ಎಂದು ಕುಟುಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net