

ಚಾಮರಾಜನಗರ: ಕೇಂದ್ರ ಸರ್ಕಾರ ಬಜೆಟ್ ಮಂಡನೆಯಲ್ಲಿ ಅನ್ನದಾತನ ಗುಣಗಾನ ಮಾಡಿ, ಕೃಷಿ ಕ್ಷೇತ್ರದ ಕಣ್ಣಿಗೆ ಮಣ್ಣೆರಚುವ ಕಾರ್ಯವನ್ನು ಮಾಡಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆರೋಪಿಸಿದರು.
ಈ ಬಾರಿಯ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ 4 ಲಕ್ಷ ಕೋಟಿ ರೂ, ಹಣವನ್ನು ಕಡಿತ ಮಾಡಲಾಗಿದೆ. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು, ಕೃಷಿ ಸಾಲ ನೀತಿ ತಿದ್ದುಪಡಿ, ಬೆಳೆ ವಿಮೆ ಪದ್ಧತಿ ಬದಲಾವಣೆ, ಕಬ್ಬು ಬೆಳೆಗಾರರಿಗೆ ಎ್ಆರ್‌ಪಿ ದರ ನಿಗದಿಯ ಕುರಿತು ಯಾವುದೇ ಪ್ರಸ್ತಾಪ ಮಾಡಿಲ್ಲ. ಶೇ.1 ರಷ್ಟು ರೈತರಿಗೆ ಉಪಯೋಗವಿಲ್ಲದ
ಕಿಸಾನ್ ಕಾರ್ಡ್ ಕೊಡುತ್ತೇವೆ ಎನ್ನುವುದು ರೈತರ ಕಣ್ಣಿಗೆ ಮಣ್ಣೆರೆಚುವ ತಂತ್ರಗಾರಿಕೆಯಾಗಿದೆ ಎಂದು ಭಾನುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ರಾಜ್ಯ ಸರ್ಕಾರ ಹೈನುಗಾರಿಕೆ ನಡೆಸುವ ರೈತರ ಹಾಲಿನ ಪ್ರೋತ್ಸಾಹಧನವನ್ನು ಸುಮಾರು 8 ತಿಂಗಳಿಂದ ಬಿಡುಗಡೆ ಮಾಡಿಲ್ಲ. ಮಲೆಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟದ ಸಭೆ ನಡೆಸುವ ಮೊದಲು, ರೈತರಿಗೆ ಹಣ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಸಂಘಟನೆ ವತಿಯಿಂದ ಸಚಿವ ಸಂಪುಟಕ್ಕೆ ಕಪ್ಪುಬಾವುಟ ಪ್ರದರ್ಶನ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಾಜ್ಯದಲ್ಲಿ ಶುಂಠಿ ಬೆಲೆ ಕುಸಿತವಾಗಿರುವ ಕಾರಣ ಎಂಐಎಸ್ ಯೋಜನೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಲು ರಾಜ್ಯ ಸರ್ಕಾರ ಕೇಂದ್ರಕ್ಕೆ ರೈತರ ಒತ್ತಾಯಕೆ ಕನಿಷ್ಠ 7000 ರೂಗೆ ಖರೀದಿಸಲು ವರದಿ ಸಲ್ಲಿಸಿದೆ. ಸದ್ಯದಲ್ಲಿಯೇ ಖರೀದಿ ಕೇಂದ್ರಗಳ ಮೂಲಕ ಕನಿಷ್ಠ ಬೆಂಬಲ ಬೆಲೆಗೆ ಖರೀದಿ ಆರಂಭವಾಗುತ್ತದೆ. ರೈತರು ದಲ್ಲಾಳಿಗಳ ಶೋಷಣೆಗೆ ಬಲಿಯಾಗಿ ಶುಂಠಿ ಮಾರಾಟ ಮಾಡಬಾರದು. ಈ ಬಗ್ಗೆ ಚಾಮರಾಜನಗರ, ಮೈಸೂರು ಸಂಸದರು ದೆಹಲಿಯಲ್ಲಿ ಕೂಡಲೇ ವರದಿ ಅನುಮೋದನೆ ಮಾಡಿಸಿ ರೈತರ ಹಿತ ಕಾಯಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಅರಿಶಿನ ಬೆಳೆಗಾರರ ಸಂಘದ ನಾಗಾರ್ಜುನ್, ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಕಹಳ್ಳಿ ಮಹದೇವಸ್ವಾಮಿ, ಸಂಘಟನಾ ಕಾರ್ಯದರ್ಶಿ ದೇವರಾಜ್, ಕಾರ್ಯಾಧ್ಯಕ್ಷ ಉಡಿಗಾಲ ರೇವಣ್ಣ, ಸತೀಶ್, ಶಿವಕುಮಾರ್ ಹಾಜರಿದ್ದರು.