

ರಾಮನಗರ: ಭವಿಷ್ಯದ 25 ವರ್ಷಗಳ ಬಲಿಷ್ಠ ಭಾರತದ ಪ್ರಗತಿಯ ನೀಲಿ ನಕ್ಷೆಯನ್ನು ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ ಪ್ರತಿಬಿಂಬಿಸಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು ಬಣ್ಣಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸಂಕಷ್ಟವನ್ನು ಎದುರಿಸಿ ಆರೋಗ್ಯ ಮೂಲಸೌಕರ್ಯಗಳ ಸುಧಾರಣೆ ನಿಟ್ಟಿನಲ್ಲಿ ಭಾರತ ಮುಂಚೂಣಿಯಲ್ಲಿದೆ. ಆರ್ಥಿಕತೆಯ ಚೇತರಿಕೆಗೆ ಬಲವಾದ ಸ್ಥಿತಿಸ್ಥಾಪಕತ್ವವನ್ನು ಪ್ರತಿಬಿಂಬಿಸುತ್ತದೆ. ಪ್ರಸಕ್ತ ಸಾಲಿನಲ್ಲಿ ಆರ್ಥಿಕ ಬೆಳವಣಿಗೆ ಶೇ.9.2 ಮುಟ್ಟಲಿದೆ ಎಂದು ಅಂದಾಜಿಸಲಾಗಿದೆ. ಸ್ವಾತಂತ್ರ್ಯ ನಂತರ 100 ವರ್ಷಗಳ ಭಾರತ ಎಂಬ ದೂರದೃಷ್ಟಿಯನ್ನು ಸಾರುವ ಗುರಿಯನ್ನು ಬಜೆಟ್ ಹೊಂದಿದೆ ಎಂದರು.
ಡಿಜಿಟಲ್ ಆರ್ಥಿಕತೆ ಮತ್ತು ಆರ್ಥಿಕ ತಂತ್ರಜ್ಞಾನವನ್ನು ಸಕ್ರಿಯಗೊಳಿಸಿದ ಅಭಿವೃದ್ಧಿ, ಶಕ್ತಿ ಪರಿವರ್ತನೆ ಮತ್ತು ಹವಾಮಾನ ಕ್ರಿಯೆ ಮತ್ತು ಸಾರ್ವಜನಿಕ ಬಂಡವಾಳ ಹೂಡಿಕೆಯೊಂದಿಗೆ ಖಾಸಗಿ ಹೂಡಿಕೆಯಿಂದ ಪ್ರಾರಂಭವಾಗುವ ಸಣ್ಣ ಚಕ್ರದ ಮೇಲೆ ಅವಲಂಬಿತವಾಗಿದೆ. ಇದು ಖಾಸಗಿ ಬಂಡವಾಳ ಹೂಡಿಕೆಗೆ ಸಹಾಯ ಮಾಡುತ್ತದೆ. ಕಳೆದ ವರ್ಷದ ಬಜೆಟ್‌ನ ಉಪಕ್ರಮಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ. ಆರೋಗ್ಯ ಮೂಲಸೌಕರ‌್ಯವನ್ನು ಬಲಪಡಿಸುವುದು, ಲಸಿಕೆ ಕಾರ‌್ಯಕ್ರಮದ ತ್ವರಿತ ಅನುಷ್ಠಾನಮತ್ತು ಸಾಂಕ್ರಾಮಿಕ ರೋಗದ ಪ್ರಸ್ತುತ ಅಲೆಗೆ ರಾಷ್ಟ್ರವ್ಯಾಪಿ ಚೇತರಿಸಿಕೊಳ್ಳುವ ಪ್ರಕ್ರಿಯೆಯಾಗಿದೆ ಎಂದು ಹುಲುವಾಡಿ ದೇವರಾಜ್ ಬಣ್ಣಿಸಿದರು.
ಆತ್ಮನಿರ್ಭರ ಭಾರತ ದೃಷ್ಟಿಯನ್ನು ಸಾಧಿಸಲು 14 ವಲಯಗಳಲ್ಲಿ ಉತ್ಪಾದಕತೆ ಸಂಬಂಧಿತ ಪ್ರೋತ್ಸಾಹಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಹಣಕಾಸು ಮೂಲ ಸೌಕರ್ಯ ಮತ್ತು ಅಭಿವೃದ್ಧಿಗಾಗಿ ರಾಷ್ಟ್ರೀಯ ಬ್ಯಾಂಕ್ ಮತ್ತು ರಾಷ್ಟ್ರೀಯ ಆಸ್ತಿ ಪುನರ್ ನಿರ್ಮಾಣ ಕಂಪನಿಯು ತನ್ನ ಚಟುವಟಿಕೆಗಳನ್ನು ಪ್ರಾರಂಭಿಸಿದೆ. ಬೆಳವಣಿಗೆಗೆ ನಿರಂತರ ಉತ್ತೇಜನ ಒದಗಿಸುವಾಗ, ಪ್ರಸ್ತುತ ಬಜೆಟ್ ಇದಕ್ಕೆ ಸಮನಾಂತರ ಟ್ರ್ಯಾಕ್ ಹಾಕುತ್ತದೆ ಎಂದು ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ 25 ಸಾವಿರ ಕಿ.ಮೀ. ಹೆದ್ದಾರಿ ಜಾಲ ವಿಸ್ತರಿಸಲಾಗುತ್ತಿದೆ. ದೇಶದಲ್ಲಿ ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿಯನ್ನು ಉತ್ತೇಜಿಸುವುದು, ಆರಂಭದಲ್ಲಿ ರೈತರು 5 ಕಿ.ಮೀ. ಗಂಗಾ ನದಿಯ ಉದ್ದಕ್ಕೂ ಕಾರಿಡಾರ್‌ನ್ನು ಪ್ರೋತ್ಸಾಹಿಸಲಾಗುವುದು. ಖಾದ್ಯ ತೈಲದ ಆಮದನ್ನು ಕಡಿಮೆ ಮಾಡಲು ತೈಲ ಬೀಜಗಳ ದೇಶೀಯ ಉತ್ಪಾದನೆಯನ್ನು ಹೆಚ್ಚಳ, ಸಹಕಾರಿ ಸರ್ಚಾಜ್ ಶೇ. 7ಕ್ಕೆ ಇಳಿಸಲಾಗಿದೆ. ರೈತರಲ್ಲಿ ಅರಣ್ಯ ಕೃಷಿ ಉತ್ತೇಜಿಸಲು ಯೋಜನೆ ರೂಪಿಸಿರುವುದು ಹಸಿರು ಕ್ರಾಂತಿಗೆ ಸಹಕಾರವಾಗಿದೆ ಎಂದು ತಿಳಿಸಿದರು. ಶೈಕ್ಷಣಿಕ ವ್ಯವಸ್ಥೆ ಡಿಜಿಟಲೀಕರಣ, ನಗರ ಪ್ರದೇಶಗಳಿಗೆ 250 ಕೋಟಿ ರೂ. ವೆಚ್ಚದಲ್ಲಿ ಶ್ರೇಷ್ಠತಾ ಕೇಂದ್ರಗಳ ಸ್ಥಾಪನೆ, ಡಿಜಿಟಲ್ ವಿಶ್ವವಿದ್ಯಾಲಯ ಸ್ಥಾಪಿಸುವ ಪ್ರಸ್ತಾಪ ಮಾಡಿರುವುದು ಶೈಕ್ಷಣಿಕ ಕ್ರಾಂತಿಗೆ ಪೂರಕವಾಗಿದೆ ಎಂದು ತಿಳಿಸಿದರು.
ನೀರಾವರಿ, ರೈಲ್ವೆ, ಮೂಲಸೌಕರ್ಯ, ಹೂಡಿಕೆ, ರಕ್ಷಣೆ, ಸಾಮಾಜಿಕ ಕಲ್ಯಾಣ, ಬ್ಯಾಂಕಿಂಗ್, ತೆರಿಗೆ ಸೇರಿದಂತೆ ವಿವಿಧ ವಲಯಗಳಲ್ಲೂ ಸಹ ಹೊಸ ಯೋಜನೆಗಳನ್ನು ರೂಪಿಸುವ ಮೂಲಕ ಜನಸಾಮಾನ್ಯರ ಬಜೆಟ್ ಆಗಿ ರೂಪುಗೊಂಡಿದೆ ಎಂದು ದೇವರಾಜು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಕೇಶವಮೂರ್ತಿ, ಪ್ರಧಾನ ಕಾರ್ಯದರ್ಶಿ ರಾಜೇಶ್ , ಮಾಧ್ಯಮ ಪ್ರಮುಖ್ ರಾಜಶೇಖರ್ ರೆಡ್ಡಿ ಇದ್ದರು.