ಮೈಸೂರು: ಕೇಂದ್ರ ತೆರಿಗೆ ಇಲಾಖೆಯು ಇತ್ತೀಚೆಗೆ ಬೆಂಗಳೂರು ವಿಭಾಗಕ್ಕೆ 99 ಹವಾಲ್ದಾರ್ ಹುದ್ದೆಗಳಿಗೆ ನೇಮಕಾತಿ ಮಾಡಿದ್ದು, ಅದರಲ್ಲಿ ಒಬ್ಬರೂ ಕನ್ನಡಿಗರು ಇಲ್ಲ ಎಂದು ಮೈಸೂರಿನ ಕನ್ನಡ ಕ್ರಿಯಾ ಸಮಿತಿ ಮತ್ತು ಬೆಂಗಳೂರಿನ ಕನ್ನಡ ಗೆಳೆಯರ ಬಳಗ ಕಿಡಿಕಾರಿದೆ.
ಇದರ ಬಗ್ಗೆ ಮುಖ್ಯಮಂತ್ರಿ ತಕ್ಷಣವೇ ಗಮನಹರಿಸಿ ನೇಮಕಾತಿ ಪಟ್ಟಿಯನ್ನು ಕೇಂದ್ರ ಸರ್ಕಾರ ತಡೆಹಿಡಿಯುವಂತೆ ಒತ್ತಡ ತರಬೇಕು.
ಕನ್ನಡಿಗರ ನೇಮಕಾತಿಯಲ್ಲಿ ಆಸಕ್ತಿಯನ್ನು ಹೊಂದಿರುವ ಕೇಂದ್ರ ಸಚಿವ ವಿ.ಸೋಮಣ್ಣ ಅವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಕನ್ನಡ ಕ್ರಿಯಾ ಸಮಿತಿಯ ಕಾರ್ಯದರ್ಶಿ ಸ. ರ. ಸುದರ್ಶನ, ಕನ್ನಡ ಗೆಳೆಯರ ಬಳಗದ ಪ್ರಧಾನ ಕಾರ್ಯದರ್ಶಿ ರಾ.ನಂ. ಚಂದ್ರಶೇಖರ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಅಖಿಲ ಭಾರತದ ಆಯ್ಕೆ ನೆಪದಲ್ಲಿ ಸ್ಥಳೀಯ ಮಟ್ಟದ ಉದ್ಯೋಗಗಳಲ್ಲೂ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಈ ಎಲ್ಲ 99 ಹುದ್ದೆಗಳು ಬೆಂಗಳೂರು ವಿಭಾಗದ ವ್ಯಾಪ್ತಿಗೆ ಒಳಪಡುವಂತಹವು.
ಆದ್ದರಿಂದ ರಾಜ್ಯದ ಸಂಸದರು ಕೂಡ ಗಮನಿಸಿ ಕನ್ನಡಿಗರ ಹಿತರಕ್ಷಣೆ ಮಾಡಬೇಕೆಂದು ಆಗ್ರಹಿಸಿದ್ದಾರೆ.