

ಹುಬ್ಬಳ್ಳಿ: ಪ್ರವಾಹದಿಂದ ಮುಂಬೈ-ಕರ್ನಾಟಕ ಹಾಗೂ ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಅಂದಾಜು 35-40 ಸಾವಿರ ಕೋಟಿ ರೂ. ನಷ್ಟು ಬೆಳೆ ಹಾನಿ ಸಂಭವಿಸಿದೆ. ಕೇಂದ್ರ ಸರ್ಕಾರ ವರದಿಗಾಗಿ ಕಾಯದೇ ತಕ್ಷಣದ ಪರಿಹಾರ ಘೊಷಿಸಬೇಕು ಎಂದು ಗದಗ ಶಾಸಕ, ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಕೆ. ಪಾಟೀಲ ಆಗ್ರಹಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಿ ಹಾನಿ ಅಂದಾಜು ಮಾಡಿದ್ದೇವೆ. 10 ಲಕ್ಷ ಹೆಕ್ಟೇರ್ನಷ್ಟು ಬೆಳೆ ಹಾನಿಯಾಗಿದೆ. ರಾಜ್ಯ ಸರ್ಕಾರ ಪ್ರವಾಹ ಪೀಡಿತ ಪ್ರದೇಶಗಳಿಗೆ ಅಧಿಕಾರಿಗಳನ್ನು ಕಳುಹಿಸಿ ವೀಕ್ಷಣೆ ಮಾಡಿಸುವುದು, ಬ್ಲಾಂಕೆಟ್ ವಿತರಣೆ, ವರದಿ ತಯಾರಿಸುವುದಕಷ್ಟೇ ಸೀಮಿತವಾಗಬಾರದು. ಪೀಡಿತರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ಕೆಲಸ ಆಗಬೇಕಿದೆ ಎಂದರು.
ರಾಜ್ಯ ಸರ್ಕಾರ ನಿಷ್ಕ್ರೀಯವಾಗಿದೆ. ಹವಾಮಾನ ಇಲಾಖೆ ಮುಂಚಿತವಾಗಿ ಮುನ್ಸೂಚನೆ ನೀಡಿದರೂ ಮುಂಜಾಗೃತೆ ಕ್ರಮ ವಹಿಸಿಲ್ಲ. ಕಾಳಜಿ ಕೇಂದ್ರಗಳಲ್ಲಿ ಅಧಿಕಾರಗಳ ದರ್ಪ, ಅಸಡ್ಡೆ, ನಿಷ್ಕಾಳಜಿ, ನಿರ್ಲಕ್ಷ್ಯಳ ಕುರಿತು ಮಾಧ್ಯಮಗಳು ವರದಿ ಮಾಡಿವೆ ಎಂದು ಹೇಳಿದರು.
ಪಶ್ಚಿಮ ಪದವೀಧರ ಕ್ಷೇತ್ರ ಕಾಂಗ್ರೆಸ್ ತೆಕ್ಕೆಗೆ: ಕಳೆದ 12 ವರ್ಷಗಳಿಂದ ಕಳೆದುಕೊಂಡಿರುವ ಪಶ್ಚಿಮ ಪದವೀಧರ ಕ್ಷೇತ್ರ ಈ ಬಾರಿ ಕಾಂಗ್ರೆಸ್ ತೆಕ್ಕೆಗೆ ಬರಲಿದೆ. ನಮ್ಮ ಅಭ್ಯರ್ಥಿ ಕುಬೇರಪ್ಪ ಗೆಲ್ಲುವ ಸಂಪೂರ್ಣ ವಿಶ್ವಾಸ ನನಗಿದೆ. ಅವರು ಈ ಕ್ಷೇತ್ರಕ್ಕೆ ವಿಶೇಷತೆ ತಂದುಕೊಡಲಿದ್ದಾರೆ ಎಂದರು. ಕೃಷ್ಣಾ ನದಿ ನೀರು ಹಂಚಿಕೆ ಸಂಬಂಧ ಕೇಂದ್ರ ಜಲಶಕ್ತಿ ಸಚಿವರು ತೆಲಂಗಾಣ ಪರವಾಗಿ ಮೃದು ಧೋರಣೆ ತೋರಿಸಿದ್ದಾರೆ. ಈ ವಿಷಯದಲ್ಲಿ ರಾಜ್ಯ ಸರ್ಕಾರ ತೀಕ್ಷ್ಣ ಪ್ರತಿಕ್ರಿಯೆ ನೀಡಬೇಕಿತ್ತು. ಸ್ಪಷ್ಟ ನಿಲುವು ತಾಳುವ ಅವಶ್ಯಕತೆ ಇದೆ. ಮತ್ತೆ ಈ ವಿಷಯ ನ್ಯಾಯಾಧೀಕರಣದ ಮುಂದೆ ಹೋಗಬಾರದು. ರಾಜ್ಯ ಸರ್ಕಾರ ತಕ್ಷಣ ಸರ್ವ ಪಕ್ಷಗಳ ಸಭೆ ಕರೆದು ಕೇಂದ್ರದ ಬಳಿ ನಿಯೋಗ ಒಯ್ಯುವ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು. ಶಾಸಕರಾದ ಪ್ರಸಾದ ಅಬ್ಬಯ್ಯ, ಶ್ರೀನಿವಾಸ ಮಾನೆ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರು ಇದ್ದರು.