ಕೇಂದ್ರ ಜನವಿರೋಧಿ ನೀತಿ ಅನುಸರಿಸುತ್ತಿದೆ, ಮಾಜಿ ಸಚಿವ ಅಂಜನಾಮೂರ್ತಿ ಆರೋಪ

07 Nela Ph 03 yathinagadi
Published on

ನೆಲಮಂಗಲ: ಕೇಂದ್ರ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ. ಜನಸಾಮಾನ್ಯರಿಗೆ ವಿವಿಧ ಆಶ್ವಾಸನೆ ನೀಡಿ, ಅಧಿಕಾರಕ್ಕೆ ಬಂದು ಕೊಟ್ಟ ಆಶ್ವಾಸನೆಗಳನ್ನೇ ಮರೆತುಬಿಟ್ಟಿದೆ ಎಂದು ಮಾಜಿ ಶಾಸಕ ಅಂಜನಾಮೂರ್ತಿ ಆರೋಪಿಸಿದರು.

ಇಂಧನ ಬೆಲೆ ಹೆಚ್ಚಳ ಖಂಡಿಸಿ ನೆಲಮಂಗಲದ ಅರಿಶಿಣಕುಂಟೆಯ ಶ್ರೀ ಆಂಜನೇಯ ಸ್ವಾಮಿ ದೇಗುಲದ ಮುಂಭಾಗದಲ್ಲಿ ಬುಧವಾರ ಆಯೋಜಿಸಿದ್ದ ಸೈಕಲ್ ಮತ್ತು ಎತ್ತಿನಗಾಡಿ ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿದರು.

ಅಧಿಕಾರ ಹಿಡಿದ ಬಳಿಕ ಜನಪರ ಕೆಲಸಗಳಿಗೆ ಹೆಚ್ಚಿನ ಒತ್ತು ನೀಡಬೇಕಾಗಿದ್ದ ಸರ್ಕಾರ ಜನವಿರೋಧಿ ಕೆಲಸಗಳಿಗೆ ಒತ್ತು ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ. ನಾಗರಾಜು ಮಾತನಾಡಿ, ರಾಜ್ಯಾದ್ಯಂತ 224 ವಿಧಾನಸಭಾ ಕ್ಷೇತ್ರಗಳಲ್ಲಿ ಸೈಕಲ್ ಜಾಥಾ ಹಮ್ಮಿಕೊಂಡು ಪ್ರತಿಭಟಿಸಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಭ್ರಷ್ಟ ಆಡಳಿತವನ್ನು ಜನರ ಮುಂದೆ ಅನಾವರಣಗೊಳಿಸುವುದು ಇದರ ಉದ್ದೇಶವಾಗಿದೆ. ಸರ್ಕಾರ ಕೂಡಲೇ ಇಂಧನ ಬೆಲೆ ಇಳಿಸಬೇಕು. ಇಲ್ಲವಾದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕೆಪಿಸಿಸಿ ಸದಸ್ಯ ಖಲೀಮುಲ್ಲಾ, ಬ್ಲಾಕ್ ಅಧ್ಯಕ್ಷ ಜಗದೀಶ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಾಗರತ್ನಮ್ಮ, ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕ ಗ್ರಾಮಾಂತರ ಜಿಲ್ಲಾ ಕಾರ್ಯಾಧ್ಯಕ್ಷ ಕನಕರಾಜು, ಕಿಸಾನ್ ಕಾಂಗ್ರೆಸ್ ಕಾರ್ಯದರ್ಶಿ ಪ್ರದೀಪ್‌ಕುಮಾರ್, ಬಿಎಂಟಿಸಿ ಮಾಜಿ ನಿರ್ದೇಶಕ ಮಿಲ್ಟ್ರಿಮೂರ್ತಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net