ಕೇಂದ್ರ ಅನುದಾನ ನೀಡುತ್ತಿಲ್ಲ

WhatsApp Image 2024-08-15 at 12.26.55 PM
Published on

ರಾಜ್ಯದ ಅಭಿವೃದ್ಧಿಗೆ ಇನ್ನೂ ಅನುದಾನ ಬೇಕಿದ್ದು, ಕೇಂದ್ರ ಸರ್ಕಾರ ಅನುದಾನ ನೀಡುತ್ತಿಲ್ಲ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದರು.
ಬಳ್ಳಾರಿ : ನಗರದ ವಿಮ್ಸ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೇಂದ್ರದ ತೆರಿಗೆ ವಿಚಾರದಲ್ಲಿ ಶೇ.23ರಷ್ಟು ಕಡಿತವಾಗಿದ್ದು, ಇದರಿಂದ 15-20ಸಾವಿರ ಕೋಟಿ ರೂ. ರಾಜ್ಯಕ್ಕೆ ವಂಚಿತವಾಗುತ್ತದೆ. ದೇಶದ ಅತಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿ ಕರ್ನಾಟಕವಿದ್ದರೂ ಪ್ರಗತಿಗೆ ಹಿನ್ನಡೆಯಾಗಿದೆ. ದೇಶದಲ್ಲಿ ಮೊದಲ ಬಾರಿಗೆ ಸುಪ್ರೀಂಕೋರ್ಟ ನಲ್ಲಿ ಕೇಂದ್ರದ ವಿರುದ್ಧ ಮೊಕದ್ದಮೆ ಹೂಡಿ ಹಣ ತರುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ತೆರಿಗೆ ಪಾಲು ಸರಿಯಾಗಿ ಬಂದರೆ ರಾಜ್ಯದ ಪ್ರಗತಿಗೆ ಸಹಕಾರಿಯಾಗಲಿದೆ. ಕಂದಾಯ ಮಾತ್ರವಲ್ಲದೆ ಇತರೆ ಇಲಾಖೆ ಜಮೀನು ಸಹ ಗುರುತಿಸುವ ಚಿಂತನೆ ನಡೆಸಿದೆ. ರೈತರ ಫಾರಂ 3, 57, 53 ಇತ್ಯಾರ್ಥ ಆಗುವವರಿಗೆ ಯಾವುದೇ ಕಾರಣಕ್ಕೂ ಒತ್ತುವರಿಯೆಂದು ಪರಿಗಣಿಸುವುದಿಲ್ಲ. ಭೂ ಸುರಕ್ಷಾ ಮೂಲಕ ಹಳೆ ದಾಖಲೆ ರಾಜ್ಯದ ಪ್ರತಿ ಜಿಲ್ಲೆಯ ಒಂದು ತಾಲೂಕಿನಲ್ಲಿ ಡಿಜಿಟಲ್ ಮಾಡಲು ಕ್ರಮಕೈಗೊಳ್ಳಲಾಗಿದ್ದು, 31 ತಾಲೂಕುಗಳಲ್ಲಿ ಈವರೆಗೆ 4.31ಕೋಟಿ ಪುಟಗಳನ್ನು ಸ್ಕ್ಯಾನ್ ಮಾಡಿದೆ. ಸೆಪ್ಟೆಂಬರ್ ತಿಂಗಳಿಂದ ದಾಖಲೆಗಳನ್ನು ಡಿಜಿಟಲ್ ಮಾಡುವ ಕಾರ್ಯ ಎಲ್ಲ ಜಿಲ್ಲೆ, ತಾಲೂಕುಗಳಲ್ಲಿ ಆರಂಭ ಮಾಡಲಾಗುವುದು. ರಾಜ್ಯದಲ್ಲಿ ಆರ್ ಟಿಸಿಯಲ್ಲಿ 4.8 ಕೋಟಿ ಖಾಸಗಿ ಮಾಲೀಕ ಖಾತೆ ದಾರರಿದ್ದು, ಅವರೆಲ್ಲರಿಗೂ ಆಧಾರ ಜೋಡಣೆ ಮಾಡುವ ಕಾರ್ಯ ಮಾಡಲಾಗುತ್ತಿದೆ. ಇದರಿಂದ ನಕಲಿ ದಾಖಲೆ ಸೃಷ್ಟಿಗೆ ಕಡಿವಾಣ ಹಾಕಲಾಗುತ್ತದೆ. ರಾಜ್ಯದಲ್ಲಿ ಸರ್ವೆಯರ್ ಕೊರತೆ ಹೆಚ್ಚಿದ್ದು, ಸಿಎಂ ಗಮನಕ್ಕೆ ತಂದಿದ್ದು, 750 ಹುದ್ದೆಗಳ ಭರ್ತಿ ಮಾಡಲು ಒಪ್ಪಿಗೆ ಸೂಚಿಸಿದ್ದು, ಎಡಿಎಲ್ಆರ್, ಸರ್ವೆಯರ್ ಹುದ್ದೆಗಳ ನೇಮಕಾತಿ ಶೀಘ್ರದಲ್ಲಿ ನಡೆಯಲಿದೆ ಎಂದರು. ಭೂ ಮಂಜೂರಾತಿ ಮಾಡಿಸಿಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಯೋಜನೆಯಲ್ಲಿ ಈಗಾಗಲೇ ಜಿಲ್ಲೆಯಲ್ಲಿ ಶೇ.80 ರಷ್ಟು 5,23,542 ರೈತರ ಜಮೀನು ಪೈಕಿ 4,12,084 ಭೂ ಮಾಲೀಕರ ಜಮೀನನ್ನು ಅವರ ಆಧಾರ ಸಂಖ್ಯೆಗೆ ಜೋಡಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಶೇ.80.27 ರಷ್ಟು ಅಂದರೆ 55.638 ಸರ್ಕಾರಿ ಜಮೀನುಗಳ ಪೈಕಿ 48,786 ಆಸ್ತಿಗಳನ್ನು ಲ್ಯಾಂಡ್ ಬೀಟ್ ತಂತ್ರಾಂಶಕ್ಕೆ ಒಳಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಸರ್ವೇಯರ್ ಲಭ್ಯತೆ ನೋಡಿಕೊಂಡು ಒತ್ತುವರಿ ತೆರವು ಮಾಡಲು ಕ್ರಮ ಕೈಗೊಳ್ಳಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net