ಕೆಸ್ತೂರು ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ

19 yelandur 01
ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ನರೇಗಾ ಯೋಜನೆ ಹಣ ಪಾವತಿಯಾಗಿಲ್ಲ ಎಂದು ಆಗ್ರಹಿಸಿ ನರೇಗಾ ಕೂಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.
Published on

ಯಳಂದೂರು: ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ನರೇಗಾ ಯೋಜನೆಯಡಿ ಕೂಲಿ ಹಣವನ್ನು ಪಾವತಿ ಮಾಡಿಲ್ಲ ಆರೋಪಿಸಿ ಕೆಸ್ತೂರು ಗ್ರಾಮದ ಮಹಿಳೆಯ ಕೂಲಿ ಕಾರ್ಮಿಕರು ಕೆಸ್ತೂರು ಗ್ರಾಮ ಪಂಚಾಯಿತಿ ಕಚೇರಿಗೆ ಬುಧವಾರ ಮುತ್ತಿಗೆ ಹಾಕಿ ಪ್ರತಿಭಟನೆ ನೆಡಸಿದರು.

ಗ್ರಾಮದ ರಾಜೇಶ್ ಮಾತನಾಡಿ, ಜುಲೈ ತಿಂಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ 95 ಜನ ಕೂಲಿ ಕಾರ್ಮಿಕರು ಸುಮಾರು 10 ರಿಂದ 15 ದಿನಗಳ ಕಾಲ ಕೆಲಸ ಮಾಡಿದ್ದಾರೆ. ಕಾರ್ಮಿಕರಿಗೆ 3 ತಿಂಗಳಿಂದ ಕೂಲಿ ಹಣ ಪಾವತಿ ಆಗಿಲ್ಲ. ಇದರಿಂದ ಅವರ ಜೀವನ ನಿರ್ವಹಣೆ ಕಷ್ಟದಾಯಕವಾಗಿದೆ. ವಿಳಂಬ ಮಾಡದೆ ಕೂಡಲೇ ಬಾಕಿ ಹಣ ಪಾವತಿಸಲು ಪಿಡಿಒ ಹೆಚ್ಚಿನ ಗಮನಹರಿಸಬೇಕು ಎಂದು ಒತ್ತಾಯಿಸಿದರು.

ಬಳಿಕ ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯಿತಿ ವ್ಯವಸ್ಥಾಪಕ ಶಿವಕುಮಾರ್ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ಪಿಡಿಒ ಲಲಿತಾ ಮಾತನಾಡಿ, ಸರ್ಕಾರದಿಂದ ಅನುದಾನ ಬಿಡುಗಡೆ ಆದ ಕೂಡಲೇ ನರೇಗಾ ಯೋಜನೆಯಡಿ ಕೆಲಸ ಮಾಡಿರುವ ಕೂಲಿ ಕಾರ್ಮಿಕರ ಖಾತೆಗೆ ಹಣ ಪಾವತಿಯಾಗಲಿದೆ. ಮುಂದಿನ 15 ದಿನಗಳಲ್ಲಿ ಕೂಲಿ ಹಣ ಪಾವತಿಯಾಗುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net