ಕೆಸರುಗದ್ದೆಯಾದ ವಾರಂಬಳ್ಳಿ-ನಿವಣೆ ಮಾರ್ಗ: ನಡುರಸ್ತೇಲಿ ನಾಟಿ ಮಾಡಿದ ಗ್ರಾಮಸ್ಥರ ಪ್ರತಿಭಟನೆ

HOS WEB
Published on

ಹೊಸನಗರ: ಸೊನಲೆ ಗ್ರಾಪಂ ವ್ಯಾಪ್ತಿಗೆ ಬರುವ ವಾರಂಬಳ್ಳಿ-ಕೊಳಗಿ-ನಿವಣೆ ಸಂಪರ್ಕ ರಸ್ತೆಯು ಕೆಸರುಗದ್ದೆಯಂತಾಗಿದ್ದು, ಹಲವು ಬಾರಿ ಮನವಿ ಸಲ್ಲಿಸಿದರೂ ಸಂಬಂಧಪಟ್ಟವರು ಗಮನ ಹರಿಸಿಲ್ಲ ಎಂದು ಕಿಡಿಕಾರಿದ ಗ್ರಾಮಸ್ಥರು, ಗುರುವಾರ ನಡುರಸ್ತೆಯಲ್ಲೇ ನಾಟಿ ಮಾಡಿ ಪ್ರತಿಭಟನೆ ನಡೆಸಿದರು.

ಈ ರಸ್ತೆ ನಿವಣೆ-ಹುಂಚ-ಹೊಸನಗರಕ್ಕೆ ಸಂಪರ್ಕ ಕಲ್ಪಿಸಲಿದ್ದು ಸಂಪೂರ್ಣ ಹದಗೆಟ್ಟಿದೆ. ಅಂಚೆ ಕಚೇರಿ, ತಾಲೂಕು ಕಚೇರಿ, ಗ್ರಾಮ ಪಂಚಾಯಿತಿ ಹೀಗೆ ಎಲ್ಲ ಕಚೇರಿಗಳಿಗೂ ಈ ರಸ್ತೆಯ ಮೂಲಕವೇ ತೆರಳಬೇಕು. ಇಲ್ಲದಿದ್ದಲ್ಲಿ 25 ಕಿಮೀ ಸುತ್ತಿಕೊಂಡು ತಾಲೂಕು ಕೇಂದ್ರಕ್ಕೆ ಹೋಗಬೇಕಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಸ್ತೆ ದುಸ್ಥಿತಿ ಬಗ್ಗೆ ಹಲವು ಬಾರಿ ಗ್ರಾಪಂ, ತಾಪಂ ಅಧಿಕಾರಿಗಳು, ಶಾಸಕರು, ಸಚಿವರಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಗ್ರಾಮೀಣ ಜನರ ಅಳಲಿಗೆ ಯಾರೂ ಸ್ಪಂದಿಸುತ್ತಿಲ್ಲ ಎಂದು ಪ್ರತಿಭಟನಾನಿರತರು ಆರೋಪಿಸಿದರು.

ಕೂಡಲೇ ಜನಪ್ರತಿನಿಧಿಗಳು, ಸ್ಥಳೀಯ ಆಡಳಿತ ರಸ್ತೆ ರಿಪೇರಿ ಮಾಡಿಸಬೇಕು. ಇಲ್ಲವಾದರೆ ಮುಂಬರುವ ಚುನಾವಣೆಗಳನ್ನು ಬಹಿಷ್ಕರಿಸಿ, ತಾಲೂಕು ಕಚೇರಿ ಎದುರು ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net