

ಅರಸೀಕೆರೆ: ರೈತರು, ವರ್ತಕರು ಹಾಗೂ ಗ್ರಾಹಕರ ಸ್ನೇಹಿಯಾಗಬೇಕಿದ್ದ ನಗರದ ಪುರಾತನ ಸಂತೆ ಮೈದಾನ ಕೊಳಚೆ ನೀರಿನಿಂದಾಗಿ ಕೆಸರಿನ ತಾಣವಾಗಿ ಮಾರ್ಪಟ್ಟಿದೆ.
ಇದಕ್ಕೆ ಪೂರಕ ಎನ್ನುವಂತೆ ವ್ಯಾಪಾರಸ್ಥರು ಖರೀದಿಸಿದ ತರಕಾರಿ ಮೂಟೆಗಳನ್ನು ಕೆಸರಿನಲ್ಲಿಯೇ ರಾಶಿ ಮಾಡುತ್ತಿರುವ ದೃಶ್ಯ ಕಣ್ಣಿಗೆ ರಾಚುವಂತಿದೆ. ಪರಿಣಾಮ ವಹಿವಾಟು ನಡೆಸಲು ಬರುವವರಿಗೆ ಡೆಂೆ, ಚಿಕೂನ್‌ಗುನ್ಯ, ಮಲೇರಿಯದಂತಹ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದ್ದು, ಆತಂಕದಲ್ಲಿಯೇ ತರಕಾರಿ ಕೊಂಡೊಯ್ಯುವಂತಾಗಿದೆ.
ಈ ಅವ್ಯವಸ್ಥೆ ಆಡಳಿತ ವ್ಯವಸ್ಥೆಯನ್ನು ಅಣಕಿಸುವಂತಿದ್ದು, ಮಂಗಳವಾರ ಹೊರತುಪಡಿಸಿ ನಿತ್ಯ ನಡೆಯುವ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿರುವವರಿಗೆ ಶುಚಿತ್ವ ಎನ್ನುವುದು ಮರೀಚಿಕೆಯಾಗಿದೆ. ರಾತ್ರಿ ವೇಳೆ ಮಲ, ಮೂತ್ರ ವಿಸರ್ಜನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಮಣ್ಣಿನ ರಾಶಿಯ ಮೇಲೆ ತರಕಾರಿ ಚೀಲಗಳನ್ನಿರಿಸಿ ಮನಬಂದಂತೆ ವಹಿವಾಟು ನಡೆಸುತ್ತಿರವುದು ಗ್ರಾಹಕರ ಪಿತ್ತ ನೆತ್ತಿಗೇರುವಂತೆ ಮಾಡಿದೆ.
ಶತಮಾನಗಳ ಇತಿಹಾಸ ಹೊಂದಿರುವ ಸಂತೆ ಮೈದಾನಕ್ಕೆ ತಾಲೂಕಿನ ಗಂಡಸಿ, ಜಾವಗಲ್, ಬಾಣಾವರ, ಕಸಬಾ, ಕಣಕಟ್ಟೆ ವ್ಯಾಪ್ತಿಯ ಹಳ್ಳಿಗಳಿಂದ ಸಹಸ್ರಾರು ರೈತರು ಬೆಳ್ಳಂಬೆಳಗ್ಗಯೇ ಆಟೋ, ಟ್ರ್ಯಾಕ್ಟರ್, ಟಾಟಾ ಏಸ್ ವಾಹನಗಳಲ್ಲಿ ತಾವು ಬೆಳೆದ ತರಕಾರಿಗಳನ್ನು ಜೊತ್ತು ತರುತ್ತಾರೆ. ಆದರೆ ಇಲ್ಲಿ ಸರಿಯಾದ ವ್ಯವಸ್ಥೆ ಇಲ್ಲದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಮರೀಚಿಕೆ: ತರಕಾರಿ ಹರಾಜು ನಡೆಯುವ ಸ್ಥಳದಲ್ಲಿ ಅಗತ್ಯಕ್ಕೆ ತಕ್ಕಂತೆ ಸುಸಜ್ಜಿತ ನೆಲಹಾಸು, ಶುದ್ಧ ಕುಡಿಯುವ ನೀರು, ಶೌಚಗೃಹ, ನೆರಳು ಹೊದಿಕೆ ಸೇರಿ ಯಾವುದೇ ಬಗೆಯ ಮೂಲಸೌಕರ್ಯವಿಲ್ಲ. ಇದರಿಂದಾಗಿ ಮಾರುಕಟ್ಟೆಗೆ ಬರುವ ಬಗೆ ಬಗೆಯ ದಾಸ್ತಾನು ಮಣ್ಣಿನ ಮೇಲೆಯೇ ಬೀಳುವಂತಾಗಿದೆ. ಪರಿಸ್ಥಿತಿ ಹೀಗಿದ್ದರೂ ಚುನಾಯಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ತಾಲೂಕಿನ ಗೀಜಿಹಳ್ಳಿ ಗ್ರಾಮದ ಬಳಿ 5 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ತರಕಾರಿ ಮಾರುಕಟ್ಟೆ ನಿರ್ಮಾಣ ಮಾಡಿದ್ದು ಉದ್ಘಾಟನೆಗೊಂಡು ತಿಂಗಳು ಕಳೆದರೂ ಬಳಕೆಗೆ ಲಭ್ಯವಾಗಿಲ್ಲ. ಅಶುಚಿತ್ವದ ಜತೆಗೆ ಮಲ, ಮೂತ್ರ ವಿಸರ್ಜನೆ ತಾಣವಾಗಿ ಮಾರ್ಪಟ್ಟಿರುವ ಸಂತೆ ಮೈದಾನದಲ್ಲಿ ನಡೆಯುತ್ತಿರುವ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು. ಜತೆಗೆ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಇಡೀ ಪ್ರಕ್ರಿಯೆಯನ್ನು ಗೀಜಿಹಳ್ಳಿ ಗ್ರಾಮದ ಬಳಿಯಿರುವ ಪ್ರಾಂಗಣಕ್ಕೆ ಸ್ಥಳಾಂತರಿಸಬೇಕು ಎನ್ನುವ ಆಗ್ರಹ ಕೇಳಿಬಂದಿದೆ. ಸಂಬಂಧಿಸಿದ ಅಧಿಕಾರಿಗಳು ಇನ್ನಾದರೂ ಇತ್ತ ಗಮನಹರಿಸಿ ಸಮಸ್ಯೆ ಪರಿಹರಿಸುವರೇ ಎಂಬುದನ್ನು ಕಾದು ನೋಡಬೇಕಿದೆ.
ಸಂತೆ ಮೈದಾನದ ಅಶುಚಿತ್ವ ಕುರಿತು ಸಾರ್ವಜನಿಕರಿಂದ ದೂರುಗಳು ಕೇಳಿ ಬಂದಿದ್ದು ಹರಾಜು ಪ್ರಕ್ರಿಯೆಯನ್ನು ಹೈಟೆಕ್ ಪ್ರಾಂಗಣಕ್ಕೆ ವರ್ಗಾವಣೆ ಮಾಡುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಈಗಾಗಲೇ ತಿಳಿಸಲಾಗಿದೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಶೀಘ್ರ ನಿರ್ಧಾರ ಕೈಗೊಳ್ಳದಿದ್ದರೆ ನಗರಸಭೆ ಆಡಳಿತದ ವತಿಯಿಂದ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು.
ಸಿ.ಗಿರೀಶ್, ನಗರಸಭೆ ಅಧ್ಯಕ್ಷ, ಅರಸೀಕೆರೆ.
ಒಂದು ಕೋಮಿನ ಜನರ ವ್ಯಾಪಾರಕ್ಕೆ ಅನುಕೂಲ ಮಾಡಿಕೊಟ್ಟು ಸಹಸ್ರಾರು ನಾಗರಿಕರಿಗೆ ಅನಗತ್ಯ ತೊಂದರೆ ನೀಡುತ್ತಿರುವುದು ಸರಿಯಲ್ಲ. ಜನರ ಆರೋಗ್ಯದ ದೃಷ್ಟಿಯಿಂದ ಜಿಲ್ಲಾಡಳಿತ ತಕ್ಷಣವೇ ಇತ್ತ ಗಮನಹರಿಸಿ ಲೋಪ ಸರಿಪಡಿಸಬೇಕು. ಇಲ್ಲದಿದ್ದಲ್ಲಿ ಬೀದಿಗಿಳಿದು ಹೋರಾಟ ನಡೆಸಲು ಹಿಂದೇಟು ಹಾಕುವುದಿಲ್ಲ.
ರಾಘವೇಂದ್ರ, ಸಾಮಾಜಿಕ ಹೋರಾಟಗಾರ
ಗೀಜಿಹಳ್ಳಿ ಗ್ರಾಮದ ಬಳಿ ನಿರ್ಮಿಸಿರುವ ಹೈಟೆಕ್ ತರಕಾರಿ ಮಾರಾಟ ಉಪ ಪ್ರಾಂಗಣಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಗೇಟ್ ನಿರ್ಮಾಣ ಸೇರಿ ಒಂದಷ್ಟು ಸಣ್ಣಪುಟ್ಟ ಕೆಲಸಗಳು ಬಾಕಿಯಿದ್ದು, ಪೂರ್ಣಗೊಂಡ ಕೂಡಲೇ ವಹಿವಾಟು ನಡೆಸಲು ಅವಕಾಶ ಮಾಡಿಕೊಡಲಾಗುವುದು
ಸಿದ್ದರಂಗಸ್ವಾಮಿ, ಎಪಿಎಂಸಿ ಕಾರ್ಯದರ್ಶಿ, ಅರಸೀಕೆರೆ.