ಕೆಸರಲ್ಲಿ ಬಿದ್ದು ಏಳದಿದ್ದರೆ ಹೊನ್ನಂಪಲ್ಲಿ ತಲುಪುವುದೇ ಅಸಾಧ್ಯ

29 bgp honnampalli road news photo
Published on

ಬಾಗೇಪಲ್ಲಿ: ಕೆಸರು ಮೆತ್ತಿಸಿಕೊಳ್ಳದೆ, ಮಣ್ಣೀರಿನ ಅಭಿಷೇಕವಾಗದೆ, ಬಿದ್ದು ಏಳದಿದ್ದರೆ ಊರು ತಲುಪುವುದೇ ಅಸಾಧ್ಯ, ಹಲವು ವರ್ಷಗಳಿಂದ ನಮ್ಮದು ನಿತ್ಯ ಸರ್ಕಸ್‌ನ ಸಾಹಸ..! ಇದು ಬಾಗೇಪಲ್ಲಿ ತಾಲೂಕು ಕೊತ್ತಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನಂಪಲ್ಲಿ ಗ್ರಾಮಸ್ಥರ ವ್ಯಂಗ್ಯಭರಿತ ಆಕ್ರೋಶದ ನುಡಿಗಳು...

ಗ್ರಾಮಕ್ಕೆ ಸಂಪರ್ಕ ಕಲ್ಪುಸುವ ರಸ್ತೆ ಇದುವರೆಗೂ ಡಾಂಬರನ್ನೇ ಕಂಡಿಲ್ಲ, ರಸ್ತೆ ಅಭಿವೃದ್ಧಿ ಪಡಿಸಿ ಡಾಂಬರು ಹಾಕಿಸುವಂತೆ 8 ವರ್ಷಗಳಿಂದ ಜನಪ್ರತಿನಿಧಿಗಳ ಬಳಿ ಗ್ರಾಮಸ್ಥರು ಮನವಿ ಮಾಡುತ್ತಿದ್ದರೂ ಇದ್ಯಾವುದು ಅವರಿಗೆ ಕಾಣಿಸುತ್ತಿಲ್ಲ!

ಕೃಷಿ ಹಾಗೂ ಉಪಕೃಷಿಯನ್ನೇ ಅವಲಂಬಿಸಿರುವ ಗ್ರಾಮಸ್ಥರು ನಿತ್ಯ ಡೇರಿಗೆ ಹಾಲು ಸರಬರಾಜು, ಬೆಳೆದ ತರಕಾರಿಗಳನ್ನು ಮಾರುಕಟ್ಟೆ ಸಾಗಿಲು ಇನ್ನಿಲ್ಲದ ಪರಿಪಾಡಲು ಪಡುವಂತಾಗಿದೆ, ತುರ್ತು ಸಂದರ್ಭದಲ್ಲಿ ಆಂಬ್ಯುಲೆನ್ಸ್ ಬರುವುದು ಕಷ್ಟವಾಗಿದೆ.

ನಿತ್ಯ ಹಾಲಿನ ಡೈರಿಗೆ ತೆರಳಲು, ಮಾರುಕಟ್ಟೆಗೆ ತರಕಾರಿ ಸಾಗಿಸಲು ಸಾಧ್ಯವಾಗುತ್ತಿಲ್ಲ, ಓಡಾಡಲು ಕಷ್ಟವಾಗುತ್ತಿದೆ, ಇನ್ನಾದರೂ ಸಂಬಂಧಪಟ್ಟವರು ರಸ್ತೆ ಅಭಿವೃದ್ಧಿಗೆ ಮುಂದಾಗಬೇಕು, ಡಾಂಬರು ಹಾಕಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ವಿಜಯ್ ಕುಮಾರ್, ಹೊನ್ನಂಪಲ್ಲಿ ಗ್ರಾಮಸ್ಥ.

ರಸ್ತೆ ಸಂಪೂರ್ಣ ಮಣ್ಣಿನಿಂದ ಕೂಡಿದೆ, ಬೇಸಿಗೆಯಲ್ಲಿ ರಸ್ತೆಯಲ್ಲ ಧೂಳುಮಯುವಾಗುತ್ತದೆ, ಇನ್ನು ಮಳೆಗಾಲದಲ್ಲಿ ಗುಡಿಗಳಲ್ಲಿ ನೀರು ತುಂಬಿಕೊಂಡು ಕೆಸರುಗದ್ದೆಯಾಗುತ್ತದೆ. ವಾಹನ ಇರಲಿ, ಓಡಾಡುವುದು ಕಷ್ಟವಾಗಿದೆ, ಬಿದ್ದು ಎದ್ದರಿಗೆ ಲೆಕ್ಕವಿಲ್ಲ ಎನ್ನುತ್ತಾರೆ ಗ್ರಾಮಸ್ಥರು. ಚುನಾವಣೆ ಸಮಯದಲ್ಲಿ ನಮ್ಮ ನೆನಪಾಗುವ ಜನಪ್ರತಿನಿಧಿಗಳು ಭರಸವೆ ನೀಡಿ ಕೈ ತೊಳೆದುಕೊಂಡು ಹೋಗುತ್ತಿದ್ದಾರೆ ಹೊರತು ಇದುವರೆಗೂ ಕನಿಷ್ಠ ರಸ್ತೆ ಅಭಿವೃದ್ಧಿಗೆ ಮುಂದಾಗಿಲ್ಲ ಎನ್ನುವುದು ಗ್ರಾಮಸ್ಥರ ಆಕ್ರೋಶದ ಮಾತುಗಳು.

ತಾಲೂಕಿನ ಹೊನ್ನಂಪಲ್ಲಿ ಗ್ರಾಮದ ರಸ್ತೆ ಹದಗೆಟ್ಟಿರುವ ಬಗ್ಗೆ ಇಲಾಖೆ ಗಮನಕ್ಕೆ ಬಂದಿದೆ, ಸರ್ಕಾರದಿಂದ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾದರೆ ಹೊನ್ನಪಲ್ಲಿ ರಸ್ತೆಗೆ ಮೊದಲ ಆದ್ಯತೆ ನೀಡುತ್ತೇವೆ. ಅನಂತ್, ಎಇಇ ಜಿಪಂ ತಾಂತ್ರಿಕ ಉಪವಿಭಾಗ, ಬಾಗೇಪಲ್ಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net