

ವಿಜಯವಾಣಿ ಸುದ್ದಿಜಾಲ ಧಾರವಾಡ
ಆಫ್ರಿಕಾ ಖಂಡದ ಉಗಾಂಡಾ, ಕೀನ್ಯಾ ಮತ್ತು ತಾಂಜಿನಿಯಾ ದೇಶಗಳ ಬ್ಯಾಂಕ್ ಪ್ರತಿನಿಧಿಗಳು ಇತ್ತೀಚೆಗೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಪ್ರಧಾನ ಕಚೇರಿಗೆ ಭೇಟಿ ನೀಡಿ ಬ್ಯಾಂಕಿನ ಸಾಮಾಜಿಕ ಬ್ಯಾಂಕಿಂಗ್ ವ್ಯವಸ್ಥರ ಕುರಿತು ಪರಿಚಯ ಮಾಡಿಕೊಂಡರು.
ನಿಯೋಗದ ಮುಖ್ಯಸ್ಥ, ಕೀನ್ಯಾದ ಇಕ್ವಿಟಿ ಗ್ರುಪ್ ಸಹ ನಿರ್ದೇಶಕ ಎರಿಕ್ ಗೆನ್ಸನ್ ಮಾತನಾಡಿ, ಉಗಾಂಡಾ, ಕೀನ್ಯಾ ಮತ್ತು ತಾಂಜಿನಿಯಾಗಳಲ್ಲಿ ಬ್ಯಾಂಕ್ ಸಾಲದ ಮೂಲಕ ಸೌರ ಶಕ್ತಿ ಅನುಷ್ಠಾನಕ್ಕೆ ಬ್ಯಾಂಕ್‌ಗಳು ಆಸಕ್ತಿ ವಹಿಸಿದ್ದು, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮಾದರಿ ಅನುಸರಿಸಲು ಇಲ್ಲಿಗೆ ಬಂದಿದ್ದೇವೆ ಎಂದರು.
ಕೆವಿಜಿ ಬ್ಯಾಂಕ್ ಅಧ್ಯಕ್ಷ ಶ್ರೀಕಾಂತ ಭಂಡಿವಾಡ ಮಾತನಾಡಿ, ಸೌರ ಶಕ್ತಿ ಅನುಷ್ಠಾನಕ್ಕೆ ಸಂಬಂಧಿಸಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಅಭೂತಪೂರ್ವ ಕಾರ್ಯ ಮಾಡಿದೆಯಲ್ಲದೆ ಬೆಳಕು, ವಾಟರ್ ಹೀಟರ್ ಅಲ್ಲದೆ ಇದೀಗ ಸಣ್ಣ ಉದ್ಯಮಶೀಲರಿಗೆ ಸೌರ ವಿದ್ಯುತ್ ಬಳಸಿ ಆದಾಯ ತರಬಲ್ಲ ಚಟುವಟಿಕೆಗೆ ಪ್ರೋತ್ಸಾಹಿಸುತ್ತಿದೆ. ಸೆಲ್ಕೊ ಸೋಲಾರ್ ಸಂಸ್ಥೆ ಜತೆಗೆ ಸೌರ ವಿದ್ಯುತ್ ಆಧಾರಿತ 227 ಸ್ವಯಂ ಉದ್ಯೋಗ ಘಟಕಗಳಿಗೆ 1.17 ಕೋಟಿ ರೂ. ಸಾಲ ನೀಡಿದೆ. ಗ್ರಿಡ್ ವಿದ್ಯುತ್ ಇಲ್ಲದ ಕಡೆ ಇಂತಹ ಸೌರ ವಿದ್ಯುತ್ ಘಟಕ ಉದ್ಯೋಗ ನೀಡುವಲ್ಲಿ ಮತ್ತು ಜನಸಾಮಾನ್ಯರ ಬದುಕು ಪರಿವರ್ತನೆಯಲ್ಲಿ ಸಹಾಯಕವಾಗಿದೆ ಎಂದರು.
ಉಗಾಂಡದ ಗ್ರಾಮೀಣ ವಿದ್ಯುತ್ ಶಕ್ತಿ ನಿಗಮದ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ವರಿಂಗಾ ಮಟಿನಂಡಿ ಮಾತನಾಡಿದರು. ತಾಂಜಿನಿಯಾದ ಇಕ್ವಿಟಿ ಬ್ಯಾಂಕಿನ ಮುಖ್ಯ ಪ್ರಬಂಧಕ ಮುಯಾಂಗೋ ಮಾರ್ಟಿನ್, ಉಗಾಂಡಾದ ಇಕ್ವಿಟಿ ಬ್ಯಾಂಕಿನ ಮುಖ್ಯ ಪ್ರಬಂಧಕಿ ಸ್ಸೆಮಕುಲ್ ನ್ಯಾಕೈರು, ಉಗಾಂಡದ ಇಕ್ವಿಟಿ ಗ್ರುಪ್ ಹಿರಿಯ ಪ್ರಬಂಧಕಿ ಎಲಿಜಾಬೆತ್ ಇದ್ದರು.
ನಂತರ ನಿಯೋಗ ಸೆಲ್ಕೊ ಸಂಸ್ಥೆ ಭೇಟಿ ನೀಡಿತು. ಸೆಲ್ಕೋ ಸಂಸ್ಥೆ ಹಿರಿಯ ಸಲಹೆಗಾರ ಅಶೋಕ ರೆಡ್ಡಿ, ಮಹಾ ಪ್ರಬಂಧಕ ಪ್ರಸನ್ನ ಹೆಗಡೆ, ಮುಖ್ಯ ಅಧಿಕಾರಿ ಸುರಭಿ, ಬ್ಯಾಂಕಿನ ಅಧಿಕಾರಿಗಳು, ಇತರರು ಇದ್ದರು.