

ಹನೂರು: ತಾಲೂಕು ವ್ಯಾಪ್ತಿಯಲ್ಲಿ 2 ದಿನಗಳಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಜನರು ಹೈರಾಣರಾಗಿದ್ದಾರೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ತಾಲೂಕು ವ್ಯಾಪ್ತಿಯಲ್ಲಿ 2 ದಿನಗಳಿಂದ ಜಿಟಿಜಿಟಿ ಮಳೆ ಯಾಗುತ್ತಿದೆ. ಪರಿಣಾಮ ಬೆಳಗ್ಗೆ ಹಾಲು, ಪತ್ರಿಕೆ ವಿತರಕರು ಪರದಾಡಿದರಲ್ಲದೆ, ಜಮೀನಿನಲ್ಲಿ ಕೆಲಸವಿಲ್ಲದೆ ಕೂಲಿ ಕಾರ್ಮಿಕರು ಮನೆಯಲ್ಲಿಯೇ ಉಳಿದಿದ್ದಾರೆ. ಹಳ್ಳಿಗಳಲ್ಲಿ ಬಹುತೇಕ ಜನರು ಹೊರಗೆ ಬಾರದೆ ಮನೆಯಲ್ಲೇ ಉಳಿಯುವಂತಾಗಿದೆ.
ಇತ್ತ ಪಟ್ಟಣಕ್ಕೆ ಆಗಮಿಸುವವರ ಜನರ ಸಂಖ್ಯೆ ವಿರಳವಾಗಿದೆ. ಇದರಿಂದ ವ್ಯಾಪಾರ ವಹಿವಾಟು ಕಡಿಮೆಯಾಗಿದ್ದು, ವ್ಯಾಪಾರಸ್ಥರು ಕಂಗಾಲಾಗಿದ್ದಾರೆ. ಮಳೆಯಿಂದಾಗಿ ಜನರು ಸ್ಪೆಟರ್, ಜರ್ಕಿನ್, ಶಾಲು ಸೇರಿದಂತೆ ಇತರ ಬೆಚ್ಚನೆಯ ಉಡುಪುಗಳ ಮೊರೆ ಹೋಗಿದ್ದಾರೆ. ಶೀತದಿಂದ ಕೂಡಿದ ವಾತಾವರಣದಲ್ಲಿ ಜನರು ಟೀ, ಕಾಫಿ, ಗೋಬಿ ಮಂಚೂರಿ, ಪಾನಿಪುರಿ, ಬಜ್ಜಿ, ಬೋಂಡಾ ಹಾಗೂ ಇತರ ಕುರುಕಲು ತಿಂಡಿಗಳ ಮೋರೆ ಹೋಗುತ್ತಿದ್ದ ಸನ್ನಿವೇಶ ಕಂಡು ಬಂತು.
ಕೆಸರು ಗದ್ದೆಯಂತಾದ ರಸ್ತೆ: ಪಟ್ಟಣದ ಆಂಜನೇಯಸ್ವಾಮಿ ದೇವಸ್ಥಾನದಿಂದ ಆರ್.ಎಸ್.ದೊಡ್ಡಿಗೆ ಕೆ.ಶಿಪ್ ಯೋಜನೆಯಡಿ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದ್ದು, ರಸ್ತೆ ವಿಸ್ತರಣೆ ಮಾಡಿ ವಾಹನಗಳು ಸಂಚರಿಸಲು ರಸ್ತೆಯನ್ನು ಸಮತಟ್ಟು ಮಾಡಲಾಗಿತ್ತು. 2 ದಿನಗಳಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದಾಗಿ ರಸ್ತೆಯು ಕೆಸರು ಗದ್ದೆಯಂತಾಗಿದ್ದು, ಕೆಲವು ಕಡೆಗಳಲ್ಲಿ ಗುಂಡಿ ನಿರ್ಮಾಣವಾಗಿ ನೀರು ನಿಂತಿದೆ. ಇದರಿಂದ ವಾಹನ ಸವಾರರು ಅದರಲ್ಲೂ ಬೈಕ್ ಸವಾರರು ಸಂಚರಿಸಲು ಹರಸಾಹಸ ಪಟ್ಟರು.