ಕೆಲಸವಿದ್ದರಷ್ಟೇ ಕುಟುಂಬ ನಿರ್ವಹಣೆ

28spt8
ಕಟ್ಟಡ ಕಳೆದಕೊಂಡು ಸಂತ್ರಸ್ತರು ಪಟ್ಟಣದ ಹೊರವಲಯದ ಕೊಡುರಸ್ತೆಯಲ್ಲಿ ಶೆಡ್ ನಿರ್ಮಿಸಿಕೊಂಡಿರುವುದು.
Published on

ಸೋಮವಾರಪೇಟೆ: ವರ್ಕ್‌ಶಾಪ್‌ನಲ್ಲಿ ಕೆಲಸವಿದ್ದರೆ ಕುಟುಂಬ ನಿರ್ವಹಣೆ ಮಾಡಬಹುದು. ಕೆಲಸವೇ ಇಲ್ಲದಿದ್ದರೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಸೋಮವಾರಪೇಟೆ ಪಟ್ಟಣದ ವರ್ಕ್‌ಶಾಪ್ ಕೆಲಸಗಾರರು ತಮ್ಮ ನೋವು ತೋಡಿಕೊಂಡರು.

ನಂ.1 ಕನ್ನಡ ದಿನಪತ್ರಿಕೆ ‘ವಿಜಯವಾಣಿ’ ವತಿಯಿಂದ ಶನಿವಾರ ಆಯೋಜಿಸಿದ್ದ ಕಾಯಕ ಸಮಾಜ ಕಾರ್ಯಕ್ರಮದಲ್ಲಿ ಪ್ರಮುಖರು ತಮ್ಮ ಅಳಲು ತೋಡಿಕೊಂಡರು.

ವರ್ಕ್‌ಶಾಪ್‌ನಲ್ಲಿ ಮೆಕಾನಿಕ್, ಟಿಂಕರಿಂಗ್, ಪೇಂಟಿಂಗ್ ಇನ್ನಿತರ ಕೆಲಸಗಳನ್ನು ಮಾಡಬೇಕು. ಇವು ಅಪಾಯಕಾರಿ ಕೆಲಸಗಳು. ಕೆಲವೊಮ್ಮೆ ಕೆಲಸದ ಸಮಯದಲ್ಲಿ ಅವಘಡಗಳು ಸಂಭವಿಸಿದರೆ, ಕೆಲಸಗಾರರ ಬದುಕು ಹಾಳಾಗುತ್ತದೆ. ಮಾಲೀಕ ಒಂದಷ್ಟು ಸಹಾಯ ಮಾಡಬಹುದು. ಉಳಿದಂತೆ ನಾವು ಬೀದಿ ಪಾಲಾಗುತ್ತೇವೆ ಎಂದು ಹೇಳಿದರು.

ವರ್ಕ್‌ಶಾಪ್‌ಗಳಲ್ಲಿ ಕೆಲಸ ಮಾಡುವವರ ಆಯುಷ್ಯ ಬಹಳ ಕಡಿಮೆಯಿದೆ. ಆಯಿಲ್ ಸೇರಿದಂತೆ ಇನ್ನಿತರ ವಸ್ತುಗಳು ಚರ್ಮಕ್ಕೆ ಅಂಟುವುದರಿಂದ ಚರ್ಮರೋಗಗಳು, ಹೃದಯ ಸಂಬಂಧಿತ ಕಾಯಿಲೆಗೆ ತುತ್ತಾಗಬೇಕಾಗುತ್ತದೆ ಎಂದರು.

ವರ್ಕ್‌ಶಾಪ್ ಕೆಲಸಗಾರರಿಗೆ ಯಾವುದೇ ಭದ್ರತೆ ಇಲ್ಲ. ಕರೊನಾ ಸಂದರ್ಭದ ಎರಡು ವರ್ಷದ ಬದುಕು ನರಕಯಾತನೆಯಾಗಿತ್ತು. ಬೇರೆ ಕೆಲಸ ಗೊತ್ತಿಲ್ಲದ ಕಾರಣ ಪರದಾಡುವಂತಾಗಿತ್ತು. ನಂತರ ಕೂಲಿ ಕೆಲಸಕ್ಕೆ ಹೋಗಿ ಕುಟುಂಬ ಸಾಕಿದೆವು. ನಂತರ ಬದುಕು ಕಟ್ಟಿಕೊಳ್ಳಲು ಶ್ರಮಪಡುತ್ತಿರುವಾಗಲೆ, ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವರ್ಕ್‌ಶಾಪ್ ಏರಿಯಾದಲ್ಲಿನ ಕಟ್ಟಡಗಳನ್ನು ಅಕ್ರಮ ಎಂಬ ಕಾರಣ ನೀಡಿ ನೆಲಸಮ ಮಾಡಿತು. ಕಳೆದ 50 ವರ್ಷಗಳಿಂದ ವರ್ಕ್‌ಶಾಪ್ ಮೂಲಕ ಬದುಕು ಕಟ್ಟಿಕೊಂಡಿದ್ದ 29 ಜನರು ಬೀದಿ ಪಾಲಾದೆವು. ಈಗ 9 ಜನ ದೂರದ ಪ್ರದೇಶದಲ್ಲಿ ಶೆಡ್ ಹಾಕಿಕೊಂಡು ವೃತ್ತಿ ಮಾಡುತ್ತಿದ್ದಾರೆ. ಇನ್ನು 20 ಕುಟುಂಬದವರು ಬೀದಿಯಲ್ಲಿದ್ದಾರೆ. ಬ್ಯಾಗ್‌ನಲ್ಲಿ ಟೂಲ್ಸ್‌ಗಳನ್ನು ಇಟ್ಟುಕೊಂಡು ಅಲ್ಲಲ್ಲಿ ಗಾಡಿ ನಿಲ್ಲಿಸಿಕೊಂಡು ಬಿಸಿಲಿನಲ್ಲಿ ಕೆಲಸವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.

ಕೆಲವರು ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಇನ್ನೂ ಕೆಲವರು ಕೆಲಸ ಅರಸಿ ನಗರ ಪ್ರದೇಶಕ್ಕೆ ತೆರಳಿದ್ದು, ಮತ್ತಷ್ಟು ಜನರು ಗ್ರಾಮೀಣ ಭಾಗದಲ್ಲಿ ಶೆಡ್ ಮಾಡಿಕೊಂಡು ಕೆಲಸ ನಿರ್ವಹಿಸುತ್ತಿದ್ದಾರೆ. ಜನರು ವಾಹನಗಳನ್ನು ದುರಸ್ತಿಪಡಿಸಲು ಹುಡುಕಿಕೊಂಡು ಹೋಗಬೇಕಾಗಿದೆ. ಪಟ್ಟಣದಲ್ಲಿ ವರ್ಕ್ಸ್‌ಶಾಪ್ ಏರಿಯಾ ಇಲ್ಲದಂತಾಗಿದೆ ಎಂದು ಅವಲತ್ತುಕೊಂಡರು.

ಪರ್ಯಾಯ ಜಾಗ ನೀಡಿಲ್ಲ
ವರ್ಕ್‌ಶಾಪ್ ಏರಿಯಾದ ಕಟ್ಟಡಗಳನ್ನು ಅಕ್ರಮ ಎಂದು ಹೇಳಿ ಪಟ್ಟಣ ಪಂಚಾಯಿತಿ ಒಡೆದು ಹಾಕಿದರು. ಪರ್ಯಾಯ ಜಾಗ ಕೊಡುವಂತೆ ಕೇಳಿಕೊಂಡರೂ ಸ್ಪಂದಿಸಲಿಲ್ಲ. ಎಲ್ಲರೂ ಬೀದಿಗೆ ಬಂದಿದ್ದೇವೆ. ಕೆಲವರು ಬೀದಿ ಬೀದಿಯಲ್ಲಿ ವಾಹನಗಳನ್ನು ರಿಪೇರಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ.
ಬಿ.ಎನ್.ರಂಗಸ್ವಾಮಿ, ಮೆಕಾನಿಕ್, ಸೋಮವಾರಪೇಟೆ

ಜಾಗದ ಕೊರತೆ
ವರ್ಕ್‌ಶಾಪ್ ಏರಿಯಾದಲ್ಲಿದ್ದ ಕಟ್ಟಡಗಳನ್ನು ಪಂಚಾಯಿತಿ ಅಧಿಕಾರಿಗಳು ನ.5ರಂದು ನೆಲಸಮ ಮಾಡಿದರು. ಪಟ್ಟಣ ವ್ಯಾಪ್ತಿಯಲ್ಲಿ ವರ್ಕ್‌ಶಾಪ್ ತೆರೆಯಲು ಜಾಗವೇ ಇಲ್ಲ. ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವರ್ಕ್‌ಶಾಪ್ ತೆರೆಯಲು ಅನುಮತಿ ಇಲ್ಲ. ಏನೂ ಮಾಡುವುದು ಗೊತ್ತಿಲ್ಲ. ಈ ವೃತ್ತಿಯಿಂದಲೆ ಬದುಕು ಕಟ್ಟಿಕೊಳ್ಳಬೇಕು.
ಪರಮೇಶ್, ಮೆಕಾನಿಕ್, ಸೋಮವಾರಪೇಟೆ

ದಿಕ್ಕು ತೋಚದಂತಾಗಿದೆ
ಸೋಮವಾರಪೇಟೆ ಪಟ್ಟಣದ ವರ್ಕ್‌ಶಾಪ್ ಏರಿಯಾದ ಕಟ್ಟಡಗಳನ್ನು ನೆಲಸಮ ಮಾಡಿದ ಮೇಲೆ ದಿಕ್ಕು ತೋಚದಂತಾಯಿತು. ಅಲ್ಲಿಂದ 4 ಕಿ.ಮೀ. ದೂರದಲ್ಲಿ ಖಾಸಗಿಯವರ ಜಾಗದಲ್ಲಿ ಶೆಡ್ ನಿರ್ಮಿಸಿಕೊಂಡು ವಾಹನಗಳ ಕೆಲಸ ಮಾಡುತ್ತಿದ್ದೇವೆ. ನಾಲ್ಕು ಜನ ಸೇರಿಕೊಂಡು 9 ಲಕ್ಷ ರೂ. ಖರ್ಚು ಮಾಡಿ ಶೆಡ್ ನಿರ್ಮಿಸಿಕೊಂಡಿದ್ದೇವೆ. ಗದ್ದೆ ಭೂಮಿಯಲ್ಲಿ ಶೆಡ್ ನಿರ್ಮಿಸಿಕೊಂಡಿದ್ದೇವೆ. ಮಳೆಗಾಲದಲ್ಲಿ ನೀರು ನಿಲ್ಲುವ ಭಯ ಇದೆ.
ಬಿ.ಆರ್.ಶಿವಪ್ಪ, ಪೇಂಟರ್, ಸೋಮವಾರಪೇಟೆ

ಸಂಕಷ್ಟಕ್ಕೆ ಸಿಲುಕಿದ್ದೇವೆ
ಸೋಮವಾರಪೇಟೆಯಲ್ಲಿ ಕಟ್ಟಡಗಳನ್ನು ಕಳೆದುಕೊಂಡ ಮೇಲೆ ಕೂಡುರಸ್ತೆಯಲ್ಲಿ ಶೆಡ್ ನಿರ್ಮಿಸಿ ಕೆಲಸ ಮಾಡುತ್ತಿದ್ದೇವೆ. ಇದು ಪಟ್ಟಣದಿಂದ ದೂರವಿದೆ. ವಾಹನ ಮಾಲೀಕರಿಗೂ ಖರ್ಚು. ಕೆಲಸವಿದ್ದರೆ ಮಾತ್ರ ದುಡಿಮೆ ಇದೆ. ಕರೊನಾ ಸಂದರ್ಭ ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿ ಸಾಲಗಾರರಾಗಿದ್ದೇವೆ. ಈಗ ವರ್ಕ್ಸ್‌ಶಾಪ್ ಏರಿಯಾದಲ್ಲಿ ಕಟ್ಟಡಗಳನ್ನು ಕಳೆದುಕೊಂಡು ಅನಾಥರಾಗಿದ್ದೇವೆ. ಮಾನವೀಯತೆಯಿಂದಾದರೂ ನಮಗೆ ಜಾಗ ಕೊಡಬಹುದಿತ್ತು.
ಸಿ.ಸಿ.ದಿನೇಶ್, ಟಿಂಕರಿಂಗ್ ಕೆಲಸಗಾರ

ಸರ್ಕಾರದಿಂದ ಸೌಲಭ್ಯಗಳಿಲ್ಲ
ವರ್ಕ್‌ಶಾಪ್ ಕೆಲಸ ಮಾಡುವವರಿಗೆ ವಿಶೇಷವಾಗಿ ಸರ್ಕಾರದಿಂದ ಸೌಲಭ್ಯವೂ ಇಲ್ಲ, ಭದ್ರತೆಯೂ ಇಲ್ಲ. ಬಡ್ಡಿರಹಿತ ಸಾಲವನ್ನೂ ಕೊಡುತ್ತಿಲ್ಲ. ಫೈನಾನ್ಸ್‌ನಿಂದ ಸಾಲವನ್ನು ಪಡೆದು ಸಲಕರಣೆಗಳನ್ನು ತೆಗೆದುಕೊಳ್ಳಬೇಕು. ಕೆಲಸ ಇಲ್ಲದಿದ್ದರೆ ಬಡ್ಡಿ ಕಟ್ಟಲು ಸಾಧ್ಯವಿಲ್ಲ. ಕುಟುಂಬ ನಿರ್ವಹಣೆ ಮಾಡುವುದೇ ಕಷ್ಟ. ನಮ್ಮ ಕಷ್ಟವನ್ನು ಕೇಳುವವರು ಇಲ್ಲದಂತಾಗಿದೆ.
ಕೆ.ಎಸ್.ಸುಜು, ಮೆಕಾನಿಕ್

ಸಂತ್ರಸ್ತರಿಗೆ ಸ್ಥಳ ನೀಡಲಿ
ವರ್ಕ್‌ಶಾಪ್ ಏರಿಯಾದಲ್ಲಿರುವ ಕೆಲ ಮಳಿಗೆಗಳನ್ನು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಪೊಲೀಸ್ ಬಿಗಿ ಭದ್ರತೆಯಲ್ಲಿ ತೆರವುಗೊಳಿಸಿದರು. ವಾಹನ ನಿಲುಗಡೆ ಮತ್ತು ಗ್ಯಾರೇಜ್ ನಿರ್ಮಿಸುವಂತೆ ಪಟ್ಟಣ ಪಂಚಾಯಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಗೊತ್ತಾಗಿದೆ. ವರ್ಕ್‌ಶಾಪ್ ಕಳೆದುಕೊಂಡಿರುವ ಸಂತ್ರಸ್ತರಿಗೆ ಜಾಗ ಕೊಡಬೇಕು.
ದಿನೇಶ್, ಮೆಕಾನಿಕ್, ಕೂಡುರಸ್ತೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net