ಕೆಲಸವನ್ನು ಸ್ಥಗಿತಗೊಳಿಸಿ ಹೋರಾಟ

7
Published on

ಮೈಸೂರು: ಪರಿಷ್ಕೃತ ದರ ಪಾವತಿ ಕುರಿತು ಉಂಟಾಗಿರುವ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು. ಇಲ್ಲವಾದರೆ, ಸೆ.1ರಿಂದ ಅನ್ನಭಾಗ್ಯ ಯೋಜನೆಯ ಆಹಾರ ಧಾನ್ಯಗಳ ಸಾಗಣೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಲೋಡಿಂಗ್ ಮತ್ತು ಅನ್ ಲೋಡಿಂಗ್ ಕಾರ್ಮಿಕರ ಒಕ್ಕೂಟ ಎಚ್ಚರಿಸಿದೆ.


ಪಡಿತರ ಸಾಗಣೆ ಗುತ್ತಿಗೆದಾರರು, ಲೋಡಿಂಗ್ ಮತ್ತು ಅನ್ ಲೋಡಿಂಗ್ ಕೆಲಸ ಮಾಡುವ ಹಮಾಲಿ ಕಾರ್ಮಿಕರ ಮುಖಂಡರೊಂದಿಗೆ 3ನೇ ಸುತ್ತಿನ ಜಂಟಿ ಸಭೆ ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಮಂಗಳವಾರ ಆಯೋಜಿಸಲಾಗಿತ್ತು. ಪರಸ್ಪರ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಂಡು ಕೆಲಸ ಸುಗಮವಾಗಿ ನಡೆದುಕೊಂಡು ಹೋಗಲು ಈ ಸಭೆಯಲ್ಲಿ ಚರ್ಚಿಸಲಾಯಿತು. ಆದರೆ, ಹಮಾಲಿ ಕಾರ್ಮಿಕರ ಮನವಿಗೆ ಗುತ್ತಿಗೆದಾರರಿಂದ ಸಕಾರಾತ್ಮಕ ಸ್ಪಂದನೆ ದೊರೆಯಲಿಲ್ಲ. ಹೀಗಾಗಿ, ಸಮಸ್ಯೆಗೆ ಪರಿಹಾರ ಸಿಗದೆ ಸಭೆ ಅಂತ್ಯಗೊಂಡಿತು.


‘ಈ ವಿಷಯದಲ್ಲಿ ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲವಾದರೆ, ಅನಿವಾರ್ಯವಾಗಿ ಕೆಲಸವನ್ನು ಸ್ಥಗಿತಗೊಳಿಸಿ ಹೋರಾಟ ನಡೆಸಬೇಕಾಗುತ್ತದೆ’ ಎಂದು ರಾಜ್ಯ ಲೋಡಿಂಗ್ ಮತ್ತು ಅನ್‌ಲೋಡಿಂಗ್ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ವರದ ರಾಜೇಂದ್ರ ತಿಳಿಸಿದ್ದಾರೆ.


ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಗೋದಾಮುಗಳಿಂದ ಪಡಿತರವನ್ನು ಲಾರಿಗೆ ಲೋಡಿಂಗ್ ಮಾಡಿಕೊಂಡು ಪಡಿತರ ಅಂಗಡಿಗೆ ತೆಗೆದುಕೊಂಡು ಹೋಗಿ ಅನ್‌ಲೋಡ್ ಮಾಡುವ ಹಮಾಲಿ ಕಾರ್ಮಿಕರಿಗೆ ಪ್ರತಿ ಕ್ವಿಂಟಲ್‌ಗೆ 19 ರೂ. ಪರಿಷ್ಕೃತ ದರ ನಿಗದಿ ಪಡಿಸಲಾಗಿದೆ. ಆದರೆ, ಸಗಟು ಮತ್ತು ಚಿಲ್ಲರೆ ಸಾಗಣೆ ಗುತ್ತಿಗೆದಾರರು ಹೊಸ ದರ ನೀಡುತ್ತಿಲ್ಲ. ಜತೆಗೆ, ಇಎಸ್‌ಐ ಮತ್ತು ಪಿಎಫ್ ಕಂತಿನ ಹಣವನ್ನೂ ಪಾವತಿ ಮಾಡುತ್ತಿಲ್ಲ. ಇದುವೇ ಗುತ್ತಿಗೆದಾರರು ಮತ್ತು ಕಾರ್ಮಿಕರ ನಡುವೆ ಜಟಾಪಟಿಗೆ ಕಾರಣವಾಗಿದೆ.


ಒಕ್ಕೂಟದ ಕಾರ್ಯದರ್ಶಿ ಸತೀಶ್ ಅರವಿಂದ, ಜಿಲ್ಲಾಧ್ಯಕ್ಷ ಕರಿನಾಯಕ, ಮುಖಂಡರಾದ ಕೃಷ್ಣಪ್ಪ, ನರಸಿಂಹಮೂರ್ತಿ, ಪುಟ್ಟಸ್ವಾಮಿ, ದೇವರಾಜು, ಜಿ.ಮಹದೇವ, ಶಿವ ಯಳಂದೂರು, ಸ್ವಾಮಿ ಗುಂಡ್ಲುಪೇಟೆ ಸೇರಿದಂತೆ 40 ಜನರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net