

ಹಾಸನ: ನಮ್ಮೊಳಗಿನ ಕ್ರೀಯಾಶೀಲತೆಯನ್ನು ಒಂದಿಷ್ಟು ಬಳಸಿಕೊಂಡರೆ ನಾವು ಮಾಡುವ ಕೆಲಸದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಶಾಸಕ ಸ್ವರೂಪ್ ಪ್ರಕಾಶ್ ಹೇಳಿದರು.
ನಗರದ ಎಂ.ಜಿ. ರಸ್ತೆಯಲ್ಲಿರುವ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ನಡೆದ ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭ ಕಾರ‌್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವತಿಯರು ತಮ್ಮ ಪದವಿ ಮುಗಿಯುವ ಹಂತಕ್ಕೆ ಬರುತ್ತಿದ್ದಂತೆ ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು, ಆರ್ಥಿಕವಾಗಿ ಸದೃಢವಾಗಿದ್ದರೆ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಕ್ರೀಡೆ, ಸಾಂಸ್ಕೃತಿಕ ಸೇರಿದಂತೆ ಇನ್ನಿತರ ಎಲ್ಲಾ ವಿಷಯಗಳಲ್ಲಿ ಮಹಿಳೆ ಸಾಧನೆ ಮಾಡಬೇಕು. ವಿದ್ಯಾರ್ಥಿ ಜೀವನದಲ್ಲಿ ಉತ್ತಮ ವಿಷಯಗಳನ್ನು ಕಲಿಯುವ ಮೂಲಕ ಪೋಷಕರಿಗೆ ಕೀರ್ತಿ ತರುವ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕು ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಚ್.ಎಲ್. ಮಲ್ಲೇಶ್‌ಗೌಡ ಮಾತನಾಡಿ, ಯುವತಿಯರು ತಮ್ಮ 18 ರಿಂದ 24 ನೇ ವಯಸ್ಸಿನ ಅವಧಿಯಲ್ಲಿ ಅತ್ಯಂತ ಜಾಗರುಕತೆಯಿಂದ ಬಳಸಿಕೊಳ್ಳಬೇಕು. ನನ್ನಿಂದ ಏನನ್ನು ಸಾಧನೆ ಮಾಡಲು ಸಾಧ್ಯವಿಲ್ಲ ಎಂಬ ಅಭಿಪ್ರಾಯವನ್ನು ಹೊಂದಬಾರದು. ಇಂದಿನ ಯುವತಿಯರು ತಾವು ಓದುವ ಪದವಿಯೇ ಬೇರೆ ಆದರೇ ವೃತ್ತಿ ಮಾಡುವುದು ಬೇರೆ ಕ್ಷೇತ್ರ ಎಂಬಂತಾಗಿದೆ. ಅದರ ಬದಲು ತಮಗಿಷ್ಟವಾದ ಹಾಗೂ ತಮಗೆ ಆಸಕ್ತಿ ಇರುವ ಕ್ಷೇತ್ರಗಳ ಬಗ್ಗೆ ಆಸಕ್ತಿ ಹೊಂದಿ ಸಾಧನೆ ಮಾಡಬೇಕು ಎಂದರು.
ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಡಾ.ಕೆ.ಟಿ. ಕೃಷ್ಣೇಗೌಡ ಮಾತನಾಡಿ, ಮಹಿಳೆ ಇಂದು ಪುರುಷರಿಗೆ ಸರಿ ಸಮಾನವಾಗಿದ್ದು, ಪ್ರತಿ ಕ್ಷೇತ್ರದಲ್ಲೂ ಛಾಪು ಮೂಡಿಸುತ್ತಿದ್ದಾರೆ. ನಿರ್ವಹಣೆ ಮಾಡುವ ಕಲೆ ಮಹಿಳೆಯರಿಗಿದ್ದು, ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರವೇ ಅತೀ ಮುಖ್ಯವಾಗಿದೆ. ಹಾಗಾಗಿ ಪ್ರತಿ ಕುಟುಂಬದಲ್ಲಿ ಹೆಣ್ಣು ಮಗುವಿಗೆ ಉತ್ತಮ ಶಿಕ್ಷಣ ನೀಡುವುದರೊಂದಿಗೆ ಅವರನ್ನು ಉತ್ತಮ ವ್ಯಕ್ತಿಗಳನ್ನಾಗಿ ಮಾಡಬೇಕಾದ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಕೆ. ಗುರುರಾಜು ಮಾತನಾಡಿ, ವ್ಯಕ್ತಿತ್ವ ವಿಕಸನಕ್ಕೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಮುಖ್ಯ. ಹಾಗಾಗಿ ವಿದ್ಯಾರ್ಥಿಗಳು ಮಕ್ಕಳು ಕೇವಲ ಪಠ್ಯಕ್ಕೆ ಮಾತ್ರ ಸೀಮತವಾಗದೆ, ತಮ್ಮಲ್ಲಿನ ಪ್ರತಿಭೆ ಅನಾವರಣ ಮಾಡಿಕೊಳ್ಳಲು ಸಾಂಸ್ಕೃತಿಕ ವೇದಿಕೆ ಬಳಕೆ ಮಾಡಿಕೊಳ್ಳಬೇಕು. ಕಾಲೇಜಿನಲ್ಲಿರುವ ಸೌಲಭ್ಯವನ್ನು ಪಡೆದು ಉನ್ನತ ಸ್ಥಾನ ಪಡೆದುಕೊಳ್ಳಬೇಕು. ಕಾಲೇಜುಗಳಲ್ಲಿ ಶೈಕ್ಷಣಿಕ ವಾತಾವರಣದ ಜೊತೆಗೆ ಸಾಂಸ್ಕೃತಿಕ ವಾತಾವರಣ ಬೆಳೆಸಬೇಕು. ಕಾಲೇಜುಗಳಲ್ಲಿ ಮಕ್ಕಳನ್ನು ಉತ್ತಮ ನಾಗರೀಕರನ್ನಾಗಿ ಮಾಡುವ ಹೊಣೆಗಾರಿಕೆ ಪ್ರತಿಯೊಬ್ಬ ಶಿಕ್ಷಕರ ಕರ್ತವ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮೈಸೂರು ವಿಶ್ವ ವಿದ್ಯಾನಿಲಯದ ವತಿಯಿಂದ ನಡೆದ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು. ಅಲ್ಲದೇ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು. ಇದೇ ವೇಳೆ ಸಾಂಸ್ಕೃತಿಕ ವೇದಿಕೆ ಸಂಚಾಲಕ ಹರೀಶ್ ಹಾಗೂ ಕಾಲೇಜಿನ ವಿವಿಧ ವಿಭಾಗದ ಅಧ್ಯಾಪಕರು, ಸಿಬ್ಬಂದಿಗಳು ಹಾಜರಿದ್ದರು.