

ಲಿಂಗದಹಳ್ಳಿ: ದೇವರನ್ನು ಆರಾಧಿಸುವುದು ಅಥವಾ ಬಿಡುವುದು ಸ್ವಇಚ್ಛೆ. ಆದರೆ ಸದಾ ಕಾಲ ದೇವರ ಆರಾಧನೆಯಲ್ಲೇ ಕಾಲ ಕಳೆಯದೆ ದುಡಿಮೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.
ಲಿಂಗದಹಳ್ಳಿ ಗ್ರಾಮದೇವತೆ ಶ್ರೀ ಚಿಕ್ಕಮ್ಮ ದೇವಿ ದೇವಾಲಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಹಿಂದುಳಿದವರು ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ಮೂಲಕ ಉನ್ನತ ಹುದ್ದೆ ಪಡೆದುಕೊಳ್ಳಬೇಕು. ಉದ್ಯಮಿಗಳಾಗಿ ಇತರರರಿಗೆ ಉದ್ಯೋಗ ನೀಡುವಂತವರದಾಗ ಮಾತ್ರ ಸಮಾಜದಲ್ಲಿ ಮೇಲು-ಕೀಳೆಂಬುದನ್ನು ತೊಡೆದು ಹಾಕಬಹುದಾಗಿದೆ ಎಂದರು.
ಸಂವಿಧಾನಶಿಲ್ಪಿ ಬಿ.ಆರ್.ಅಂಬೇಡ್ಕರ್, ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ ರಾಮ್, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರಮಿಕರು ಮತ್ತು ಹಿಂದುಳಿದ ಸಮಾಜಕ್ಕೆ ಶಕ್ತಿ ತುಂಬಿದವರು. ರಾಜ್ಯ ಸರ್ಕಾರ ಪಂಚ ಗ್ಯಾರಂಟಿಗಳ ಮೂಲಕ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡುತ್ತಿದ್ದು, ಗ್ಯಾರಂಟಿಗಳ ಹಣವನ್ನು ದುಂದುವೆಚ್ಚ ಮಾಡದೆ ಸದುಪಯೋಗ ಮಾಡಿಕೊಳ್ಳುವ ಮೂಲಕ ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಹೋಗಬೇಕು ಎಂದು ತಿಳಿಸಿದರು.
ಬಾಲ್ಯದಲ್ಲಿ ದಲಿತ ಕೇರಿಯವರು ಜಮೀನುದಾರರ ಜಮೀನಿನಲ್ಲಿ ಕೂಲಿ ಮಾಡಿ ಜೀವನ ನಡೆಸಬೇಕಾಗಿತ್ತು. ಅಂದು ಸೂರ್ಯೋದಯಕ್ಕೆ ಮೊದಲೇ ಜಮೀನುಗಳಿಗೆ ಹೋದರೆ ಸೂರ್ಯಾಸ್ತದ ನಂತರ ಅವರು ನೀಡುತ್ತಿದ್ದ ಒಂದೆರಡು ಸೇರು ಭತ್ತ, ರಾಗಿ, ದವಸ ಧಾನ್ಯಗಳನ್ನು ಕೂಲಿಯಾಗಿ ಪಡೆದು ಮನೆಗೆ ತಂದು ಕುಟುಂಬ ನಿರ್ವಹಣೆ ಮಾಡಬೇಕಿತ್ತು. ಇಂದು ಕಾಲ ಬದಲಾಗಿದ್ದು, ಜಮೀನುದಾರರು ಕೂಲಿಯಾಳುಗಳನ್ನು ಹುಡುಕಿಕೊಂಡು, ಅವರು ಕೇಳಿದಷ್ಟು ಕೂಲಿ ನೀಡಿ ಕೆಲಸ ಮಾಡಿಸಿಕೊಳ್ಳುವ ಸ್ಥಿತಿ ಬಂದಿದೆ. ಎಲ್ಲರೂ ಶಿಕ್ಷಣ ಪಡೆದು ಸ್ವಾಭಿಮಾನಿಗಳಾಗಬೇಕು ಎಂದರು.
ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ಚಿಕ್ಕಮಗಳೂರು ಜಿಲ್ಲೆಯವನಾದ ನನ್ನನ್ನು ಚಿತ್ರದುರ್ಗಕ್ಕೆ ಕರೆದೊಯ್ದು ಸಂಸದರನ್ನಾಗಿ ಆಯ್ಕೆಯಾಗಲು ಕಾರಣಕರ್ತರಾದವರು ಮಾಜಿ ಸಚಿವ ಎಚ್.ಆಂಜನೇಯ. ಅವರು ಸಚಿವರಾಗಿದ್ದ ಸಂದರ್ಭದಲ್ಲಿ ಸಮಾಜ ಕಲ್ಯಾಣ ಖಾತೆಯನ್ನು ಅತ್ಯುತ್ತಮವಾಗಿ ನಿಭಾಯಿಸಿದರು. ಎಲ್ಲ ಸಮಾಜಕ್ಕೂ ಸಮಾನ ಅವಕಾಶನೀಡುವ ಮೂಲಕ ರಾಜ್ಯದ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ನಾನು ಮೊದಲಬಾರಿ ಶಾಸಕನಾಗಿದ್ದ ಸಂದರ್ಭದಲ್ಲಿ ಆಂಜನೇಯ ಸಮಾಜ ಕಲ್ಯಾಣ ಸಚಿವರಾಗಿ ತರೀಕೆರೆ ಕ್ಷೇತ್ರಕ್ಕೆ ಎರಡು ಮುರಾರ್ಜಿ ವಸತಿ ಶಾಲೆಗಳು, ಸಮುದಾಯಭವನಗಳು, ಗ್ರಾಮೀಣ ಭಾಗದ ರಸ್ತೆ, ಚರಂಡಿ, ಮುಂತಾದ ಮೂಲಭೂತ ಸೌಲಭ್ಯಗಳಿಗಾಗಿ ಹೆಚ್ಚಿನ ಅನುದಾನ ನೀಡಿದ್ದರಿಂದ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಾಯಿತು. ತರೀಕೆರೆ ಕ್ಷೇತ್ರದ ಜನರು ಇದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಕೋಡಿಹಳ್ಳಿ ಆದಿ ಜಾಂಬವ ಮಠ ಶ್ರೀ ಷಡಾಕ್ಷರಿ ಮುನಿಸ್ವಾಮೀಜಿ ಮಾತನಾಡಿ, ಹಿಂದುಳಿದವರಲ್ಲಿ ಹಲವಾರು ಜಾತಿಗಳಿದ್ದು ಅದರಲ್ಲಿ ಪ್ರಮುಖ ಜಾತಿಯಾಗಿರುವ ಮಾದಿಗ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಸಮಾಜದಲ್ಲಿ ಅಸ್ತಿತ್ವ ಗುರುತಿಸಿಕೊಳ್ಳದೆ ಅವರಿವರೊಂದಿಗೆ ಸೇರಿ ಜೈಕಾರ ಹಾಕುತ್ತ ಅವರ ಬೆಂಬಲಿಗರಂತೆ ಜೀವಿಸುತ್ತಿರುವುದನ್ನು ಬಿಟ್ಟು ಕಷ್ಟಪಟ್ಟು ದುಡಿಯುವ ಮೂಲಕ ಆರ್ಥಿಕವಾಗಿ ಸಬಲರಾಗಿ ಉನ್ನತ ಸ್ಥಾನಗಳನ್ನು ಅಲಂಕರಿಸಬೇಕು ಎಂದರು.
ಶ್ರೀ ಚಿಕ್ಕಮ್ಮದೇವಿಯ ದೇವಾಲಯದ ಕಲಶಾರೋಹಣ ನೆರವೇರಿಸಿ ಆರ್ಶೀವಚನ ನೀಡಿದ ಹುಣಸಘಟ್ಟ ಹಾಲುಸ್ವಾಮಿ ಮಠದ ಶ್ರೀ ಗುರುಮೂರ್ತಿ ಶಿವಚಾರ್ಯ ಸ್ವಾಮೀಜಿ, ಮಾನವ ಸಂಘ ಜೀವಿಯಾಗಿದ್ದು, ಹಗಲು ಹೊತ್ತಿನಲ್ಲಿ ತುತ್ತಿನ ಚೀಲ ತುಂಬಿಸಿಕೊಳ್ಳಲು ಕೆಲಸ ಮಾಡಿ ಸಂಜೆ ಮನೆಗಳಿಗೆ ದಣಿದು ಬರುವವರಿಗೆ ದೇವಸ್ಥಾನ, ಮಠಗಳು ನೆಮ್ಮದಿ ನೀಡುತ್ತವೆ. ಭಕ್ತರು ದೇವಾಲಯಗಳಿಗೆ ತೆಗೆದುಕೊಂಡು ಹೋಗುವ ಪೂಜಾ ಸಾಮಗ್ರಿಗಳು ದೇವರಿಗೆ ನೈವೇದ್ಯ ಮಾಡಿದ ನಂತರ ಪ್ರಸಾದ ರೂಪ ಪಡೆದುಕೊಳ್ಳುತ್ತವೆ ಎಂದು ತಿಳಿಸಿದರು.
ತಾಪಂ ಮಾಜಿ ಅಧ್ಯಕ್ಷ ಬಿ.ಆರ್.ರವಿ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಎನ್.ಜಿ.ರಮೇಶ್, ಬೀರೂರು ದೇವರಾಜಣ್ಣ, ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷೆ ಇಂದ್ರಮ್ಮ, ಪ್ರಧಾನ ಕಾರ್ಯದರ್ಶಿ ಅಣ್ಣಯ್ಯ, ಗ್ರಾಪಂ ಸದಸ್ಯ ಎಂ.ಕೆ.ಚಂದ್ರಪ್ಪ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಆರ್.ತಮ್ಮಯ್ಯ, ದೇವಾಲಯ ಸಮಿತಿ ಅಧ್ಯಕ್ಷ ಕೆ.ಕುಮಾರ್, ಖಜಾಂಚಿ ರುದ್ರೇಶ್, ಪದಾಧಿಕಾರಿಗಳು ಇದ್ದರು.