

ಧಾರವಾಡ: ಸೇವೆಯಿಂದ ವಜಾಗೊಳಿಸಿರುವ ಕ್ರಮ ಖಂಡಿಸಿ ನಗರದ ಭಾರತೀಯ ತಂತ್ರಜ್ಞಾನ (ಐಐಟಿ) ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಭದ್ರತಾ ಸಿಬ್ಬಂದಿ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಚೆನ್ನೈನ ಸೆಕ್ಯೂರಿಟಿ ಸರ್ವಿಸ್ ಮೂಲಕ ಐಐಟಿಗೆ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿತ್ತು. ಅಂದಾಜು 8 ತಿಂಗಳಿಂದ ಕರ್ತವ್ಯ ನಿರ್ವಹಿಸಿದ 27 ಸಿಬ್ಬಂದಿಗೆ ಲಾಕ್ಡೌನ್ ಸಂದರ್ಭದಲ್ಲಿ ಮನೆಯಲ್ಲೇ ಇದ್ದು ಅಗತ್ಯ ಮಾಹಿತಿ ನೀಡುವಂತೆ ಸೂಚಿಸಿದ್ದರು. ಇದೀಗ ಏ. 1ರಿಂದ ಕೆಲಸದಿಂದ ತೆಗೆದಿರುವ ಮಾಹಿತಿ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ಕೆಲಸದಿಂದ ತೆಗೆದರೆ ಹೇಗೆ ಎಂದು ಸೆಕುರಿಟಿ ಏಜೆನ್ಸಿ ಹಾಗೂ ಐಐಟಿ ಸಂಸ್ಥೆಗೆ ಪ್ರಶ್ನಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.
ಕರೊನಾ ತುರ್ತು ಸಂದರ್ಭದಲ್ಲಿ ಕಂಪನಿಗಳು ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊರಡಿಸಿದ ಆದೇಶವನ್ನು ಗಾಳಿಗೆ ತೂರಿದ್ದಾರೆ. ಏಜೆನ್ಸಿ ಕೆಲವು ತಿಂಗಳ ವೇತನವನ್ನೂ ನೀಡಿಲ್ಲ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯ ಒದಗಿಸಿಕೊಡಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಅಮಜಾದ್ಖಾನ್ ಖಾಜಿ, ರುದ್ರಪ್ಪ ಎಂ., ರಮೇಶ ಮಾಗಡಿ, ಸಂತೋಷ ಕಿರೇಸೂರ, ಪ್ರಕಾಶ ಕಿತ್ತೂರ, ಎಸ್.ಎಂ. ಅಳವಂಡಿ,
ಅಶೋಕ ಗಾಣಿಗೇರ, ಖಲಂದರ್ ಎಂ., ಬಸವರಾಜ ಜವಳಿ, ಶ್ರೀಶೈಲ ತಾಬೋಜಿ, ಜಗದೀಶ ಎಚ್., ಸಿಕಂದರ್ ಬ್ಯಾಳಿ, ನಾಗರಾಜ ಕುಸುಗಲ್, ಬಸವರಾಜ ಕರೀಕಟ್ಟಿ, ಇತರರು ಇದ್ದರು.