ಕೆಲಸಕ್ಕೆ ಬಾರದ ಹೈಟೆಕ್ ಹಾಕರ್ ಝೋನ್!

03
Published on

ಬೆಳಗಾವಿ: ಶಹಾಪುರ ನಾಥ್ ಪೈ ವೃತ್ತದಿಂದ ಖಾಸಬಾಗ ಬಸವೇಶ್ವರ ವೃತ್ತದ ವರೆಗೆ ಬೀದಿ ವ್ಯಾಪಾರಸ್ಥರಿಗಾಗಿ ಸ್ಮಾರ್ಟ್‌ಸಿಟಿ ಕಂಪನಿಯಿಂದ ಮಳಿಗೆಗಳುಳ್ಳ ಹೈಟೆಕ್ ಮಾರುಕಟ್ಟೆ ವಲಯ (ಹಾಕರ್ ರೆನ್) ನಿರ್ಮಾಣವಾಗಿದೆ. ಆದರೆ, ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ವಿಳಂಬವಾಗುತ್ತಿದ್ದು ಅದ್ಯಾವಾಗ ಮಳಿಗೆಗಳನ್ನು ಹಂಚಿಕೆ ಮಾಡುತ್ತಾರೆ ಎಂದು ವ್ಯಾಪಾರಸ್ಥರು ಎದುರು ನೋಡುತ್ತಿದ್ದಾರೆ.

5.45 ಕೋಟಿ ರೂ. ವೆಚ್ಚದಲ್ಲಿ ಒಟ್ಟು 140 ಮಳಿಗೆಗಳನ್ನು ನಿರ್ಮಿಸಲಾಗಿದೆ. ಪ್ರತಿ ಮಳಿಗೆಯು ತರಕಾರಿ, ಹಣ್ಣು ಇತರ ವಸ್ತುಗಳನ್ನು ಇಡಲು ಶಿಸ್ತುಬದ್ಧ ಶೆಲ್ಫ್‌ಗಳನ್ನು ನಿರ್ಮಿಸಲಾಗಿದೆ. ಒಂದೇ ಲೈನ್‌ನಲ್ಲಿ ಒಂದೇ ಸೂರಿನಡಿ 140 ಅಂಗಡಿಗಳನ್ನು ಅಚ್ಚುಕಟ್ಟಾಗಿ ನಿರ್ಮಿಸಲಾಗಿದೆ. 2021ರ ಅಂತ್ಯದಲ್ಲಿ ಹಾಕರ್ ರೆನ್ ನಿರ್ಮಿಸಿ ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡಲಾಗಿದೆ. ಆದರೆ, ಈವರೆಗೂ ಅಧಿಕಾರಿಗಳು ಫಲಾನುಭವಿಗಳ ಆಯ್ಕೆ ಮಾಡುವಲ್ಲಿ ಆಸಕ್ತಿ ತೋರಿಸುತ್ತಿಲ್ಲ. ಹೀಗಾಗಿ ಕೋಟ್ಯಂತರ ರೂ. ವ್ಯಯಿಸಿ ನಿರ್ಮಿಸಿದ ಹೈಟೆಕ್ ಮಳಿಗೆಗಳು ಧೂಳು ತಿನ್ನುತ್ತಿವೆ.

ಸುಸಜ್ಜಿತ ಸೌಲಭ್ಯ: ಖಾಸಬಾಗದಲ್ಲಿ ಪ್ರತಿ ಭಾನುವಾರ ಸಂತೆ ನಡೆಯುತ್ತದೆ. ತರಕಾರಿ ವ್ಯಾಪಾರಸ್ಥರು ಮಳೆಯಲ್ಲೇ ನೆನೆದುಕೊಂಡು ವ್ಯಾಪಾರ ಮಾಡುತ್ತಿದ್ದರು. ಈ ತೊಂದರೆ ನಿವಾರಿಸುವುದಕ್ಕೆ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಹೈಟೆಕ್ ಹಾಕರ್ ರೆನ್ ನಿರ್ಮಿಸಲಾಗಿದೆ. ಹಾಕರ್ ರೆನ್ ಎರಡೂ ಬದಿ ಕಾಂಕ್ರಿಟ್ ರಸ್ತೆ ನಿರ್ಮಿಸಲಾಗಿದೆ. ಸಂಚಾರ ದಟ್ಟಣೆಯಾಗಬಾರದು ಎಂಬ ಉದ್ದೇಶದಿಂದ ಅಂಗಡಿಗಳ ಪಕ್ಕದಲ್ಲಿ ಪಾಥ್ ವೇ ನಿರ್ಮಿಸಲಾಗಿದೆ. ಅದರ ಪಕ್ಕದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಿಸಲಾಗಿದೆ. ಜತೆಗೆ ಚರಂಡಿ ಮೇಲೆ ಫುಟ್ ನಿರ್ಮಿಸಿರುವುದು ವಿಶೇಷ.

ಖಾಸಬಾಗದ ಬೀದಿ ವ್ಯಾಪಾಸ್ಥರಿಗೆ ನಿರ್ಮಿಸಿರುವ ಹಾಕರ್ ರೆನ್ ಹಸ್ತಾಂತರಿಸುವುದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. ಯೋಜನೆಯಲ್ಲಿ ಏನೆಲ್ಲ ನಿಯಮಗಳು ಇವೆ. ಯಾವ ಕ್ರಮಗಳನ್ನು ಅನುಸರಿಸಬೇಕು ಎನ್ನುವುದನ್ನು ತಿಳಿದು ಸೂಕ್ತ ಕ್ರಮ ಕೈಗೊಳ್ಳುತ್ತೇವೆ.

| ಶುಭ ಬಿ., ಮಹಾನಗರ ಪಾಲಿಕೆ ಆಯುಕ್ತೆ, ಬೆಳಗಾವಿ

ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸುಸಜ್ಜಿತ ವ್ಯಾಪಾರ ಮಳಿಗೆಗಳನ್ನು ನಿರ್ಮಿಸಲಾಗಿದೆ. ಮೂರು ವರ್ಷವಾದರೂ ವ್ಯಾಪಾರಸ್ಥರಿಗೆ ಹಂಚಿಕೆ ಮಾಡಿಲ್ಲ. ಕೋಟಂತ್ಯರ ರೂ. ವ್ಯಯ ಮಾಡಿದರೂ ಉದ್ದೇಶ ಈಡೇರುತ್ತಿಲ್ಲ. ಈ ವಿಷಯದಲ್ಲಿ ಅಧಿಕಾರಿಗಳಿಗೆ ಇಚ್ಛಾಶಕ್ತಿ ಇಲ್ಲ. ಮಳಿಗೆಗಳ ಹಸ್ತಾಂತರಿಸುವುದಕ್ಕೆ ಸಂಬಂಧಿಸಿದ ಜನಪ್ರತಿನಿಧಿಗಳಾದರೂ ಮುತುವರ್ಜಿ ವಹಿಸಬೇಕಿದೆ.

| ಲಿಂಗರಾಜ ದಾಸನಕೊಪ್ಪ, ಖಾಸಬಾಗ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net