

ಕಂಪ್ಲಿ: ಅನ್ಯ ಜಿಲ್ಲೆಗೆ ವರ್ಗಾವಣೆ ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಶಾಸಕ ಜೆ.ಎನ್.ಗಣೇಶ್‌ಗೆ ರಾಜ್ಯ ಗುತ್ತಿಗೆ ಶುಶ್ರೂಷಾಧಿಕಾರಿಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಗುರುವಾರ ಮನವಿ ಸಲ್ಲಿಸಿದರು.
ಸಂಘದ ತಾಲೂಕು ಅಧ್ಯಕ್ಷ ಡಿ.ದೇವಣ್ಣ ಮಾತನಾಡಿ, ಗುತ್ತಿಗೆ ಶುಶ್ರೂಷಾಧಿಕಾರಿಗಳ ಸೇವೆ ಕಾಯಂಗೊಳಿಸಿ, ಅಲ್ಲಿಯತನಕ ಸಮಾನ ಕೆಲಸಕ್ಕೆ ಸಮಾನ ವೇತನ ನಿಗದಿಗೊಳಿಸಬೇಕು. ಮುಂದಿನ ವಿಶೇಷ ನೇರ ನೇಮಕಾತಿಯಲ್ಲಿ ಜ್ಯೇಷ್ಠತೆ ಆಧಾರದಡಿ ಕೃಪಾಂಕ ಮತ್ತು ವಯೋಮಿತಿ ಸಡಿಲಿಕೆ ಮಾಡಬೇಕು. ಅನ್ಯ ಜಿಲ್ಲೆಗೆ ವರ್ಗವಣೆ ನೀಡಬೇಕು ಎಂದು ಆಗ್ರಹಿಸಿದರು.
ತಾಲೂಕಿನ 23 ಜನ ಶುಶ್ರೂಷಾಧಿಕಾರಿಗಳ ಪೈಕಿ 19 ಜನರನ್ನು ಕಾಯಂಗೊಳಿಸಬೇಕು. ನಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫೆ.24ರಿಂದ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಪುರಸಭಾಧ್ಯಕ್ಷ ಭಟ್ಟ ಪ್ರಸಾದ್ ಅವರಿಗೂ ಮನವಿ ಸಲ್ಲಿಸಿದರು. ಶುಶ್ರೂಷಾಧಿಕಾರಿಗಳಾದ ಲತಾ, ನಾಗಲಿಂಗಮ್ಮ, ಪೂರ್ಣಿಮಾ, ನಂದಿನಿ, ಹುಸೇನ್‌ಬೀ, ಶಂಷಾದ್‌ಬೇಗಮ್ ಇತರರಿದ್ದರು.