

ಅರಸೀಕೆರೆ : ನಮ್ಮ ಜನಸೇವೆ ಮಾಡುವ ಹಂಬಲ ಹೊಂದಿರುವ ಕಾರ್ಯಕರ್ತರಿಗೆ ಪಕ್ಷದಲ್ಲಿ ಉತ್ತಮ ಸ್ಥಾನಮಾನಗಳು ದೊರೆತರೆ ಮತ್ತಷ್ಟು ಜನಪರ ಕೆಲಸ ಕಾರ್ಯಗಳನ್ನು ಕಾಣಲು ಸಾಧ್ಯ ಎಂದು ಗೃಹ ನಿರ್ಮಾಣ ಮಂಡಳಿಯ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು.
ಕಾಂಗ್ರೆಸ್‌ನ ಸಾಮಾಜಿಕ ನ್ಯಾಯ ಸಮಿತಿಯ ಜಿಲ್ಲಾಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾದ ವೆಂಕಟೇಶ್ ಅವರಿಗೆ ನಗರದ ಹೊರವಲಯದ ಗೀಜಿಹಳ್ಳಿಯ ಹಳ್ಳಿ ಮನೆಯಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಳೆದ ಎರಡು ದಶಕಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಮುಖಂಡರಾಗಿ ಪಕ್ಷ ಸಂಘಟನೆ ಮಾಡುತ್ತಾ ಬಂದಿರುವ ವೆಂಕಟೇಶ್ ಅವರಿಗೆ ಪಕ್ಷ ಕೂಡ ಹಲವು ಜವಾಬ್ದಾರಿಗಳನ್ನು ನೀಡಿದೆ. ಪಕ್ಷ ನೀಡಿದ ಎಲ್ಲಾ ಜವಾಬ್ದಾರಿಗಳನ್ನ ಯಶಸ್ವಿಯಾಗಿ ನಿಭಾಯಿಸುತ್ತಾ ಪಕ್ಷದ ನಾಯಕರ ವಿಶ್ವಾಸ ಗಳಿಸಿಕೊಂಡಿರುವ ವೆಂಕಟೇಶ್ ಅವರಿಗೆ ಈಗ ಜಿಲ್ಲಾ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಸ್ಥಾನ ನೀಡುವುದು ಸ್ವಾಗತಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗಂಡಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಟ್ರೋ ಬಾಬು ಮಾತನಾಡಿ, ರಾಜಕೀಯ ಕ್ಷೇತ್ರಕ್ಕೆ ಬರುವವರು ಸೇವಾ ಮನೋಭಾವ ಹೊಂದಿದ್ದರೆ ಜನರ ಪ್ರೀತಿ- ವಿಶ್ವಾಸ ಗಳಿಸುವುದು ಕಷ್ಟವಲ್ಲ. ಈ ನಿಟ್ಟಿನಲ್ಲಿ ವೆಂಕಟೇಶ್ ಅವರ ನಡೆ-ನುಡಿ ಇತರ ಯುವ ರಾಜಕಾರಣಿಗಳಿಗೆ ಆದರ್ಶ ಹಾಗೂ ಮಾರ್ಗದರ್ಶನವಾಗಿದೆ ಎಂದು ಯುವ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ಪಕ್ಷಕ್ಕೆ ನಿಷ್ಠೆಯಿಂದ ದುಡಿಯುವ ಪ್ರತಿಯೊಬ್ಬರಿಗೂ ಪಕ್ಷ ಎಂದಿಗೂ ಮೋಸ ಮಾಡುವುದಿಲ್ಲ. ಅಗತ್ಯ ಸಂದರ್ಭದಲ್ಲಿ ಸೂಕ್ತ ಗೌರವ ಮತ್ತು ಪುರಸ್ಕಾರಗಳನ್ನು ನೀಡುತ್ತದೆ. ಇದಕ್ಕೆ ನಾನೇ ಉದಾಹರಣೆ. ಪಕ್ಷ ನನಗೆ ನೀಡಿರುವ ನೂತನ ಜವಾಬ್ದಾರಿಯನ್ನು ಶಾಸಕ ಶಿವಲಿಂಗೇಗೌಡರ ಮಾರ್ಗದರ್ಶನದಲ್ಲಿ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ನಾಯಕರು ಹಾಗೂ ಮುಖಂಡರ ಸಹಕಾರದೊಂದಿಗೆ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಶ್ರಮಿಸುವುದಾಗಿ ಭರವಸೆ ನೀಡಿದರು.
ಸಮಾರಂಭದಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಗಂಜಿಗೆರೆ ಚಂದ್ರಶೇಖರ್, ಹುಡಾ ಮಾಜಿ ಅಧ್ಯಕ್ಷ ಕೃಷ್ಣ ಕುಮಾರ್, ನಗರಸಭೆ ಸದಸ್ಯ ವೆಂಕಟಮುನಿ, ಬೇಲೂರು ಪುರಸಭೆ ಮಾಜಿ ಅಧ್ಯಕ್ಷ ದಾನಿ, ತಾಪಂ ಮಾಜಿ ಸದಸ್ಯ ಆಗ್ರೋ ಬಾಬು, ಭೀಮ ಆರ್ಮಿ ಜಿಲ್ಲಾಧ್ಯಕ್ಷ ಪ್ರಸನ್ನ, ಮಂಗಳಾಪುರ ನಾಗರಾಜ್ ಉಪಸ್ಥಿತರಿದ್ದರು.