ಕೆಲಸ ಮಾಡಿಕೊಂಡಿರುವುದಾಗಿ ನಂಬಿಸಿ 1.35 ಲಕ್ಷ ರೂ ಮೋಸ

frad april
Published on

ಹಾಸನ : ಕೆಲಸ ಮಾಡಿಕೊಂಡಿರುವುದಾಗಿ ನಂಬಿಸಿದ್ದ ವ್ಯಕ್ತಿಯ ಮೋಸದಾಟಕ್ಕೆ ಬಲಿಯಾಗಿರುವ ಯುವಕನೊಬ್ಬ ಉದ್ಯೋಗದ ಆಸೆಗೆ ಬಿದ್ದು 1.35 ಲಕ್ಷ ರೂ. ಕಳೆದುಕೊಂಡಿರುವ ಘಟನೆ ನಡೆದಿದೆ.
ಸಕಲೇಶಪುರ ತಾಲ್ಲೂಕು ವಲಹಳ್ಳಿ ಗ್ರಾಮದ ಸಚಿನ್‌ಕುಮಾರ್ ಅನ್ಯಾಯಕ್ಕೆ ಒಳಗಾದವರು. ಹೆತ್ತೂರು ಹೋಬಳಿ ಕೊಣಬನಹಳ್ಳಿ ಗ್ರಾಮದ ಸಚಿನ್‌ಗೌಡ ಎಂಬಾತ ಮೋಸ ಎಸಗಿದ್ದಾನೆ ಎನ್ನಲಾಗಿದೆ.
ಪದವಿ ವ್ಯಾಸಂಗ ಮಾಡಿರುವ ಸಚಿನ್‌ಕುಮಾರ್ ಕಂಪ್ಯೂಟರ್ ತರಬೇತಿಯನ್ನು ಪಡೆದಿದ್ದಾರೆ. ಸಾಕಷ್ಟು ಪ್ರಯತ್ನದ ಬಳಿಕವೂ ಸರ್ಕಾರಿ ನೌಕರಿ ಸಿಗದ ಹಿನ್ನಲೆ ಗ್ರಾಮದಲ್ಲೇ ಮರಗೆಲಸ ಮಾಡಿಕೊಂಡಿದ್ದಾರೆ. ಸಚಿನ್‌ಗೌಡ ಅವರು ಪರಿಚಯವಾಗಿದ್ದು, ತನಗೊಂದು ಕೆಲಸ ಬೇಕೆಂದು ಸಚಿನ್‌ಕುಮಾರ್ ಹೇಳಿದಾಗ ಆತ ನಂಬುವಂತಹ ಸುಳ್ಳುಗಳನ್ನು ಸಚಿನ್‌ಗೌಡ ಹೇಳಿದ್ದಾರೆ. ವಿಧಾನಸೌಧದಲ್ಲಿ ಸಚಿವ ಭೈರತಿ ಸುರೇಶ್ ಅವರ ಕಚೇರಿಯಲ್ಲಿ ನಾನು ಕೆಲಸ ಮಾಡಿಕೊಂಡಿದ್ದು, ದೊಡ್ಡ ದೊಡ್ಡ ರಾಜಕಾರಣಿಗಳ ಸಂಪರ್ಕವಿದೆ. ಯಾವುದಾದರು ಸರ್ಕಾರಿ ಕಚೇರಿಯಲ್ಲಿ ಕೆಲಸ ಕೊಡಿಸುತ್ತೇನೆಂದು ನಂಬಿಸಿದ್ದಾನೆ. 2023ರ ಅಕ್ಟೊಬರ್‌ನಲ್ಲಿ ಸಚಿನ್‌ಕುಮಾರ್ ಅವರ ವ್ಯಾಸಂಗದ ದಾಖಲೆ ಪತ್ರಗಳನ್ನು ಪಡೆದು ಸಕಲೇಶಫುರ ತಾಲ್ಲೂಕು ಪಂಚಾಯಿತಿಯಲ್ಲಿ ಡಾಟಾ ಎಂಟ್ರಿ ಆಪರೇಟರ್ ಹುದ್ದೆ ಕೊಡಿಸುವುದಾಗಿ ಹೇಳಿದ್ದಾನೆ. ಮುಂದುವರಿದು ಆ ಕೆಲಸ ಸಿಗಬೇಕೆಂದರೆ 2.50 ಲಕ್ಷ ರೂ. ನೀಡಬೇಕೆಂದು ತಿಳಿಸಿದ್ದಾನೆ. ನೌಕರಿ ಸಿಕ್ಕರೆ ಸಾಕೆಂದು ಸಚಿನ್‌ಕುಮಾರ್ ಅವರು ಮುಂಗಡವಾಗಿ 1.35 ಲಕ್ಷ ರೂ. ನೀಡಿದ್ದಾರೆ. ಆದರೆ ಬಹಳ ದಿನಗಳು ಕಳೆದರೂ ನೌಕರಿ ಸಿಗದ ಹಿನ್ನಲೆ ವಿಚಾರಿಸಿದಾಗ ಸಚಿನ್‌ಗೌಡ ಉದ್ಯೋಗ ಕೊಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆರಂಭಿಕವಾಗಿ ನೀಡಿರುವ ಹಣವೂ ಇಲ್ಲದೆ ಮತ್ತೊಂದೆಡೆ ಉದ್ಯೋಗವು ಇಲ್ಲದೆ ಸಚಿನ್‌ಕುಮಾರ್ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಯಸಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net