ಕೆಲಸ ಮಾಡಿ ಇಲ್ಲ ಜಾಗ ಖಾಲಿ ಮಾಡಿ

bkt-16-2
ಬಾಗಲಕೋಟೆ ನಗರದ ನಗರಸಭೆ ಸಭಾಭವನದಲ್ಲಿ ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ ಅಧ್ಯಕ್ಷೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಶಾಸಕ ವೀರಣ್ಣ ಚರಂತಿಮಠ ಮಾತನಾಡಿದರು. ನಗರಸಭೆ ಉಪಾಧ್ಯಕ್ಷ ಬಸವರಾಜ ಅವರಾದಿ, ಸಭಾಪತಿ ಅಂಬಾಜಿ ಜೋಶಿ, ಬಿಟಿಡಿಎ ಪುನರ್ ವಸತಿ ಅಧಿಕಾರಿ ಗಣಪತಿ ಪಾಟೀಲ ಇತರರು ಇದ್ದರು.
Published on

ಬಾಗಲಕೋಟೆ: ಜನರ ಸಮಸ್ಯೆ, ಸಂಕಷ್ಟಗಳಿಗೆ ಸ್ಪಂದಿಸಲು ನಗರಸಭೆ ಇದೆ. ಅಧಿಕಾರಿಗಳು ಸಾರ್ವಜನಿಕರ ಹಾಗೂ ನಗರಸಭೆ ಸದಸ್ಯರು ಗಮನಕ್ಕೆ ತರುವ ಸಮಸ್ಯೆಗಳನ್ನು ಆಲಿಸಿ ತತ್ವರಿತಗತಿಯಲ್ಲಿ ಇತ್ಯರ್ಥಪಡಿಸಬೇಕು. ಸಲ್ಲದ ನೆಪ ಕೇಳಲು ಸಿದ್ಧರಿಲ್ಲ. ಕೆಲಸ ಮಾಡಿ ಇಲ್ಲವೇ ಜಾಗ ಖಾಲಿ ಮಾಡಿ ಎಂದು ಶಾಸಕ ವೀರಣ್ಣ ಚರಂತಿಮಠ ಅಧಿಕಾರಿಗಳ ಮೇಲೆ ಗರಂ ಆದರು..
ನಗರಸಭೆ ಸಭಾಭವನದಲ್ಲಿ ಬುಧವಾರ ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಎಲ್ಲ ಪಕ್ಷದ ಸದಸ್ಯರು ಅಽಕಾರಿಗಳ ವರ್ತನೆ, ನಿರ್ಲಕ್ಷ್ಯ ಧೋರಣೆ ಕುರಿತು ಧ್ವನಿ ಎತ್ತಿದರು. ನಮ್ಮ ಮಾತಿಗೆ ಬೆಲೆ ನೀಡುವದಿಲ್ಲ ಅಂತ ಬೇಸರ ಹೊರ ಹಾಕಿದರು. ಇದರಿಂದ ಕೋಪಗೊಂಡ ಶಾಸಕ ಚರಂತಿಮಠ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಜನರ ಸಮಸ್ಯೆಗಳನ್ನು ತಿಳಿಸುವ ಸಂಬಂಧ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೆ ಪ್ರತಿಕ್ರಿಯೆ ನೀಡಬೇಕು. ಕಾಲ ಹರಣ ಮಾಡುತ್ತಾ ಕುಳಿತರೇ ಸಹಿಸಲು ಸಾಧ್ಯವಿಲ್ಲ. ಪ್ರತಿ ಸಾರಿ ಎಚ್ಚರಿಕೆ ನೀಡುವುದು ನಿಮಗೂ ಸರಿಯಲ್ಲ. ಕೆಲಸ ಮಾಡುವ ಮನೋಭಾವನೆ ರೂಢಿಸಿಕೊಳ್ಳಿ. ವಾರ್ಡನಲ್ಲಿ ಇರುವ ಸಮಸ್ಯೆಗಳ ಸದಸ್ಯರು ಗಮನಕ್ಕೆ ತಂದಾಗ ಅವುಗಳ ಸಮರ್ಪಕವಾಗಿ ಪರಿಹರಿಸಬೇಕು ಎಂದು ಖಡಕ್ ಸೂಚನೆ ನೀಡಿದರು.
ಒಬ್ಬನೇ ಗುತ್ತಿಗೆದಾರನಿಗೆ ಎಂಟು ಕಾಮಗಾರಿ ಚರ್ಚೆಗೆ ಗ್ರಾಸ್:
ನಗರೋತ್ಥಾನ ಅಡಿಯಲ್ಲಿ ೬ ಕೋಟಿ ೪೦ ಲಕ್ಷ ಮೊತ್ತದ ಕಾಮಗಾರಿಗಳನ್ನು ಕೈಗೊಳ್ಳಲು ಅನುದಾನ ಬಂದಿದ್ದು, ಇದರಲ್ಲಿ ಎಂಟು ಕಾಮಗಾರಿಗಳನ್ನು ಓರ್ವ ಗುತ್ತಿಗೆದಾರರಿಗೆ ನೀಡಿರುವ ವಿಷಯ ಸಭೆಯಲ್ಲಿ ಪ್ರತಿಧ್ವನಿಸಿತು. ಒಂದೆರಡು ಕಾಮಗಾರಿ ಒಬ್ಬ ಗುತ್ತಿಗೆದಾರನಿಗೆ ನೀಡಬೇಕು. ಉಳಿದ ಕಾಮಗಾರಿಯನ್ನು ಮರು ಟೆಂಡರ್ ನೀಡಿ ಬೇರೆ ಗುತ್ತಿಗೆದಾರನಿಗೆ ನೀಡಬೇಕು. ಒಬ್ಬರಿಗೆ ಎಲ್ಲ ಕಾಮಗಾರಿ ನೀಡುವುದು ಸರಿಯಲ್ಲ. ಗುಣಮಟ್ಟದ ಕಾಮಗಾರಿ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಆಯುಕ್ತ ಆರ್.ವಾಸಣ್ಣ ಅವರಿಗೆ ಸೂಚನೆ ನೀಡಿದರು.
ಇನ್ನು ಕಾಮಗಾರಿ ನಡೆದಿರುವ ಕುರಿತು ನಗರಸಭೆ ಅಧ್ಯಕ್ಷೆ, ಉಪಾಧ್ಯಕ್ಷ, ಸಭಾಪತಿ, ಅಽಕಾರಿಗಳು ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಬೇಕು. ಗುಣಮಟ್ಟದ ಕೆಲಸ ತೆಗೆದುಕೊಳ್ಳಬೇಕು. ಸರ್ಕಾರದ ಹಣ ಅಪವ್ಯಯವಾಗಬಾರದು. ಸಂಬಂಧಪಟ್ಟ ವಾರ್ಡ್ ಸದಸ್ಯರಿಗೆ ಗಮನಕ್ಕೆ ತರಬೇಕು. ನಂತರ ಬಿಲ್ ಪಾವತಿ ಮಾಡಬೇಕು ಎಂದು ಸೂಚನೆ ನೀಡಿದರು.
ನಗರಸಭೆ ಉಪಾಧ್ಯಕ್ಷ ಬಸವರಾಜ ಅವರಾದಿ, ಸಭಾಪತಿ ಅಂಬಾಜಿ ಜೋಶಿ, ಸದಸ್ಯರಾದ ಶ್ರೀನಾಥ ಸಜ್ಜನ, ಚನ್ನಯ್ಯ ಹಿರೇಮಠ, ರತ್ನಾ ಕೆರೂರ, ಶೋಭಾ ರಾವ್, ಶಶಿಕಲಾ ಮಜ್ಜಗಿ, ಹಾಲೇಶ ಬಳ್ಳಾರಿ, ಲಕ್ಷ್ಮಣ ಮುಚಖಂಡಿ, ಹಾಜಿಸಾಬ ದಂಡಿನ, ಅಯ್ಯಪ್ಪ ವಾಲ್ಮೀಕಿ, ರಾಜೇಂದ್ರ ಬಳೂಲಮಠ, ನಗರಸಭೆ ಆಯುಕ್ತ ಆರ್.ವಾಸಣ್ಣ, ಬಿಟಿಡಿಎ ಪುನರ್ ವಸತಿ ಗಣಪತಿ ಪಾಟೀಲ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net