

ಕಮಲಾಪುರ: ಕಳೆದ ೧೫ ದಿನಗಳಿಂದ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡಿಲ್ಲವೆಂದರೆ ಏನರ್ಥ, ನಿಮಗೆ ಸರಿಯಾಗಿ ಕೆಲಸ ಮಾಡಲು ಬರಲ್ವಾ ? ಶಾಲೆಯಲ್ಲಿರುವವರು ನಿಮ್ಮ ಮಕ್ಕಳು ಅಲ್ವೇ ? ಎಂದು ಶಾಸಕ ಬಸವರಾಜ ಮತ್ತಿಮಡು ಅವರು ಸರ್ಕಾರಿ ಶಾಲೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಲೇಂಗಟಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಬುಧವಾರ ದಿಢೀರ್ ಭೇಟಿ ನೀಡಿದ ಅವರು, ಮಕ್ಕಳಿಗೆ ಶಿಕ್ಷಣದ ಜತೆಗೆ ಉತ್ತಮ ಆಹಾರ ಸಿಗಲಿ ಎಂದು ಬಿಸಿಯೂಟ ನೀಡಲಾಗುತ್ತಿದೆ. ಆದರೆ ನೀವೆಲ್ಲ ನಿರ್ಲಕ್ಷ್ಯದಿಂದ ಕೆಲಸ ಮಾಡುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಸರಿಯಾಗಿ ಊಟ ಸಿಗುತ್ತಿಲ್ಲ. ಹೀಗಾಗಿಯೇ ಶಾಲೆಗಳಿಂದ ದೂರ ಉಳಿಯುತ್ತಿದ್ದಾರೆ ಎಂದು ಕಿಡಿಕಾರಿದರು.
ಪ್ರಭಾರಿ ಮುಖ್ಯಗುರು ಶಾಂತಪ್ಪ ಪ್ರತಿಕ್ರಿಯಿಸಿ, ಗ್ಯಾಸ್ ಖಾಲಿಯಾಗಿದೆ, ಬೇಳೆ ಇಲ್ಲ. ಹೀಗಾಗಿ ಬಿಸಿಯೂಟ ಸ್ಟಾಪ್ ಮಾಡಲಾಗಿದೆ. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಅಲ್ಲದೆ ನಾನು ಹೃದಯ ಸಂಬಂಧಿ ರೋಗಿಯಾಗಿದ್ದು, ಹೆಚ್ಚಿನ ಕೆಲಸ ಮಾಡಲು ಆಗುತ್ತಿಲ್ಲ. ಹೀಗಾಗಿ ಪ್ರಭಾರಿ ಬೇಡ ಎಂದು ಬಿಇಒ ಅವರಿಗೆ ಮನವಿ ಮಾಡಿದ್ದೆ. ಆದರೂ ಬೇಕಂತಲೇ ನನಗೆ ಚಾರ್ಜ್ ಕೊಟ್ಟಿದ್ದಾರೆ ಎಂದು ಅಳಲು ತೋಡಿಕೊಂಡರು.
ತಕ್ಷಣ ಶಾಸಕ ಮತ್ತಿಮಡು ಅವರು ಬಿಇಒ ಸೋಮಶೇಖರ ಹಂಚಿನಾಳ ಅವರಿಗೆ ಕರೆ ಮಾಡಿ, ಲೇಂಗಟಿ ಸರ್ಕಾರಿ ಶಾಲೆಯಲ್ಲಿ ಸಮಸ್ಯೆಗಳು ಸಾಕಷ್ಟಿವೆ, ನಿಮ್ಮ ಗಮನಕ್ಕೆ ಬಂದರೂ ಪರಿಹಾರ ಕಲ್ಪಿಸುವ ಕೆಲಸ ಮಾಡಿಲ್ಲ. ಇಷ್ಟೊಂದು ನಿರ್ಲಕ್ಷ್ಯ ವಹಿಸಿದರೆ ಹೇಗೆ ? ನಿಮ್ಮ ತಪ್ಪಿನಿಂದಾಗಿ ಮಕ್ಕಳು ಬಿಸಿಯೂಟದಿಂದ ವಂಚಿತರಾಗುತ್ತಿದ್ದಾರೆ. ಕೂಡಲೇ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಲ್ಪಿಸಬೇಕು. ಇಲ್ಲದಿದ್ದರೆ ನಿಮ್ಮ ಮೇಲೆ ಕ್ರಮಕ್ಕೆ ಶಿಕ್ಷಣ ಇಲಾಖೆ ಆಯುಕ್ತರಿಗೆ ಪತ್ರ ಬರೆಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಗುರುವಾರವೇ ಶಾಲೆಗೆ ಭೇಟಿ ನೀಡಿ ಸಮಸ್ಯೆ ಆಲಿಸಿ, ಪರಿಹಾರ ಕಲ್ಪಿಸಲು ಶ್ರಮಿಸುವೆ ಎಂದು ಬಿಇಒ ಪ್ರತಿಕ್ರಿಯಿಸಿದರು.
ಎರಡನೇ ಬಾರಿ ಶಾಸಕರಾಗಿದ್ದರಿಂದ ಅಭಿನಂದನಾ ಸಮಾರಂಭ ನಡೆಸಿ, ಸತ್ಕರಿಸಲಾಯಿತು.
ಶ್ರೀ ಪ್ರಭುಲಿಂಗ ಸ್ವಾಮೀಜಿ, ಪ್ರಮುಖರಾದ ಹರ್ಷವರ್ಧನ ಗುಗಳೆ, ರೇವಣಸಿದ್ದಪ್ಪ ಮೂಲಗೆ, ಸಿದ್ದಣ್ಣಗೌಡ ಪಾಟೀಲ್, ದೀಪಕ ಹೂಡಲ್, ರಾಜಕುಮಾರ ಮಂಠಾಳೆ, ಸತೀಶ ಸೊರಡೆ, ನೀಲಕಂಠರಾವ ಪಾಟೀಲ್, ಶಿವಾನಂದ ಗುದಗೆ, ಗಣಪತರಾವ ಪಾಟೀಲ್, ಡಾ.ಕುಪೇಂದ್ರ ಬಿಲಗುಂದಿ, ಉದಯಕುಮಾರ ಕುಲಕರ್ಣಿ, ಶಿವಾನಂದ, ಶಿವಕುಮಾರ ಟೆಂಗಳಿ, ಶಿವರಾಜ ಹತ್ತರಕಿ, ಗೋರಕನಾಥ ರಾಠೋಡ್, ಸತೀಶ ಪೂಜಾರಿ, ಕಾಶೀನಾಥ ಹಳಕೆ, ಕಾಶೀನಾಥ ನಾಟೀಕಾರ್, ಮಸ್ತಾನ್‌ಸಾಬ್ ಪಠಾಣ್, ಮಂಜುನಾಥ ಮಾಳಗೆ, ಜೈಭೀಮ ಸಿಂಗೆ, ಹಣಮಂತ ಭವುಟೆ ಇತರರಿದ್ದರು.
ಎರಡು ವರ್ಷದಿಂದ ಎಸ್‌ಡಿಎಂಸಿ ರಚಿಸಿಲ್ಲ
ಲೇಂಗಟಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ೧ರಿಂದ ೮ರವರೆಗೆ ತರಗತಿ ನಡೆಯುತ್ತಿದ್ದು, ೬ ಜನ ಶಿಕ್ಷಕರು, ಇಬ್ಬರು ಅತಿಥಿ ಶಿಕ್ಷಕರಿದ್ದಾರೆ. ೮ ಕೋಣೆಗಳಿದ್ದು, ಇವುಗಳಲ್ಲಿ ೩ ಸೋರುತ್ತಿವೆ. ಒಟ್ಟು ೧೮೬ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅಲ್ಲದೆ ಕಳೆದ ಎರಡು ವರ್ಷಗಳಿಂದ ಶಾಲಾ ಅಭಿವೃದ್ಧಿ ಸಮಿತಿಯೂ ರಚನೆ ಮಾಡಿಲ್ಲ. ನೀವೇ ಗಮನ ಹರಿಸಿ, ನಮ್ಮೂರಿನ ಶಾಲೆಯ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಶಾಸಕರಿಗೆ ಮನವಿ ಮಾಡಿದರು.
ಪ್ರತಿ ಶಾಸಕರಿಗೆ ೨ ಕೋಟಿ ರೂ. ಅನುದಾನ ಹಾಗೂ ಎಂಎಲ್‌ಎ ಅನುದಾನದಡಿ ೫೦ ಲಕ್ಷ ರೂ. ನೀಡಲಾಗುತ್ತಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ತಿಂಗಳಾದರೂ ಒಂದು ಪೈಸೆ ಅನುದಾನ ನೀಡಿಲ್ಲ. ಹೀಗಾದರೆ ಜನತೆಗೆ ಸೌಕರ್ಯ ಒದಗಿಸುವುದಾದರೂ ಹೇಗೆ? ಲೇಂಗಟಿಯ ಮಹಾದೇವಲಿಂಗ ದೇಗುಲಕ್ಕೆ ೨೦ ಲಕ್ಷ ರೂ., ರಸ್ತೆ, ಬ್ರಿಡ್ಜ್ ಕಂ ಬ್ಯಾರೇಜ್ ಸೇರಿ ಇತರ ಕಾಮಗಾರಿ ಆರಂಭಕ್ಕೆ ಪ್ರಯತ್ನಿಸಲಾಗುವುದು.
| ಬಸವರಾಜ ಮತ್ತಿಮಡು, ಶಾಸಕ