ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ಜಾಗ ಖಾಲಿ ಮಾಡಿ :  ಪಿಡಿಒಗಳ ಕಾರ್ಯವೈಖರಿಗೆ ಶಾಸಕ ಡಾ.ರಂಗನಾಥ್ ಅಸಮಾಧಾನ

25kunigal2
Published on

ಕುಣಿಗಲ್ : ಗ್ರಾಮಗಳಲ್ಲಿ ಕರೊನಾ ಹೆಚ್ಚಾಗುತ್ತಿದ್ದು, ಸೋಂಕು ನಿಯಂತ್ರಣಕ್ಕೆ ಪಿಡಿಒಗಳ ಕಾರ್ಯವೈಖರಿ ಅಸಮಾಧಾನ ತಂದಿದೆ. ಕೆಲಸ ಮಾಡಲು ಇಷ್ಟವಿಲ್ಲದ ಪಿಡಿಒಗಳು ಜಾಗ ಖಾಲಿ ಮಾಡಬಹುದು ಎಂದು ಶಾಸಕ ಡಾ.ಎಚ್.ಡಿ.ರಂಗನಾಥ್ ಎಚ್ಚರಿಕೆ ನೀಡಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕರೊನಾ ನಿಯಂತ್ರಣ ಟಾಸ್ಕ್‌ಪೋರ್ಸ್ ಕಮಿಟಿ ಸಭೆಯಲ್ಲಿ ಮಾತನಾಡಿದರು. ಗ್ರಾಪಂ ವ್ಯಾಪ್ತಿಯಲ್ಲಿ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಲೇ ಇದೆ. ಇದರ ಜತೆಗೆ ಸಾವಿನ ಸಂಖ್ಯೆಯೂ ಹೆಚ್ಚಳವಾಗಿದೆ. ಈ ಸಂಬಂಧ ಗ್ರಾಪಂ ವ್ಯಾಪ್ತಿಯಲ್ಲಿ ರೋಗ ತಡೆಗೆ ಕ್ರಮಕೈಗೊಳ್ಳಬೇಕಾಗಿರುವ ಪಿಡಿಒಗಳು ಬೇರೆ ಬೇರೆ ಕೆಲಸಗಳಲ್ಲಿ ನಿರತರಾಗಿದ್ದಾರೆ. ಇದರಿಂದ ಮತ್ತಷ್ಟು ಪ್ರಕರಣ ಹೆಚ್ಚಾಗಲು ಕಾರಣವಾಗಿದೆ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.

ತಾಲೂಕಿನಿಂದ ಕರೊನಾಮುಕ್ತ ಮಾಡುವ ಮೂಲಕ ಜನರ ಜೀವ ಉಳಿಸುವುದೇ ನನ್ನ ಉದ್ದೇಶ. ಇದಕ್ಕೆ ಸ್ಪಂದಿಸಿ ಕೆಲಸ ಮಾಡುವುದಾದರೆ ಪಿಡಿಒಗಳು ಕೆಲಸ ಮಾಡಿ, ಇಲ್ಲವಾದರೆ ತಾಲೂಕಿನಿಂದ ಜಾಗ ಖಾಲಿ ಮಾಡಿ ಎಂದು ಗುಡುಗಿದರು. ಕರೊನಾ ಮನೆಯ ದುಡಿಯುವ ಯಜಮಾನನ್ನೇ ಬಲಿ ತೆಗೆದುಕೊಳ್ಳುತ್ತಿದೆ. ಜನರ ಆಕ್ರಂದನ ನೋಡಲು ಆಗುತ್ತಿಲ್ಲ. ಈ ವೇಳೆ ಅವರು ನಮ್ಮನ್ನು ಹಾಗೂ ಅಧಿಕಾರಿಗಳನ್ನು ಬೈಯಬಹುದು, ಇದನ್ನು ಸಹಿಸಿಕೊಂಡು ಅಧಿಕಾರಿಗಳು ಕೆಲಸ ಮಾಡಿದರೇ ಎಷ್ಟೋ ಪ್ರಾಣಗಳನ್ನು ಉಳಿಸಿದ ಪುಣ್ಯ ಸಿಗಲಿದೆ. ಈ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ತಾಲೂಕನ್ನು ಕರೊನಾಮುಕ್ತ ಮಾಡಲು ಪಣತೊಟ್ಟು ಕೆಲಸ ಮಾಡಿದರು.

ಹಳ್ಳಿಗಳಿಗೆ ಭೇಟಿ ನೀಡಿ: ತಾಲೂಕುಮಟ್ಟದ 12 ನೋಡಲ್ ಅಧಿಕಾರಿಗಳು ಕಚೇರಿಯಲ್ಲಿ ಕುಳಿತುಕೊಂಡು ಕೆಲಸ ಮಾಡುವುದನ್ನು ಬಿಟ್ಟು ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಸೋಂಕಿತರ ಮನೆಗೆ ತೆರಳಿ ಅವರ ಮನವೊಲಿಸಿ ಕರೊನಾ ಕೇರ್ ಸೆಂಟರ್‌ಗೆ ಕರೆ ತಂದು ಚಿಕಿತ್ಸೆ ಕೊಡಿಸಬೇಕು. ಇದರಿಂದ ಮತ್ತಷ್ಟು ಮಂದಿ ಸೋಂಕಿತರಾಗುವುದನ್ನು ತಡೆದು ರೋಗ ನಿಯಂತ್ರಣಕ್ಕೆ ಬರಲಿದೆ. ಜತೆಗೆ ಗ್ರಾಪಂ ಮಟ್ಟದ ಟಾಸ್ಕ್ ಸಮಿತಿ ಸಭೆಗಳನ್ನು ನಡೆಸಿ ಪಿಡಿಒ, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾರ್ಗದರ್ಶ ನೀಡಿ ಕರೊನಾ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಅಧಿಕಾರಿಗಳಿಗೆ ಡಾ.ರಂಗನಾಥ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net