

ಮೈಸೂರು: ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವುದರ ಜತೆಗೆ ವೃತ್ತಿ ಪಾವಿತ್ರೃತೆ ಉಳಿಸಿ, ಬೆಳೆಸುವ ಜವಾಬ್ದಾರಿ ವೈದ್ಯರ ಮೇಲಿದೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಅಭಿಪ್ರಾಯಪಟ್ಟರು.
ಅಪೂರ್ವ ಸ್ನೇಹ ಬಳಗ ಹಾಗೂ ಕೆಎಂಪಿ ಕೆ ಚಾರಿಟಬಲ್ ಟ್ರಸ್ಟ್‌ನಿಂದ ಚಾಮುಂಡಿಪುರಂನ ಬಾಲಬೋಧಿನಿ ಶಾಲೆ ಆವರಣದಲ್ಲಿ ವಿಶ್ವ ವೈದ್ಯರ ದಿನಾಚರಣೆ ಅಂಗವಾಗಿ ಶನಿವಾರ ಆಯೋಜಿಸಿದ್ದ ಉಚಿತ ವೈದ್ಯಕೀಯ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ರೋಗಿಗಳಿಗೆ ಆರೋಗ್ಯ ಸೇವೆ ಒದಗಿಸಲು ಪ್ರಾಮಾಣಿಕವಾಗಿ ಶ್ರಮಿಸಬೇಕು. ಜನತೆ ವೈದ್ಯರನ್ನು ದೇವರಂತೆ ಕಾಣುತ್ತಾರೆ. ವೈದ್ಯರೂ ತಮ್ಮ ವೃತ್ತಿಯಲ್ಲಿ ರೋಗಿಗಳೇ ದೇವರು ಎಂದು ಭಾವಿಸಿದ್ದಾರೆ. ಆದರೆ, ಕೆಲವು ವೈದ್ಯರ ವರ್ತನೆಯಿಂದಾಗಿ ಶ್ರೀಸಾಮಾನ್ಯರಲ್ಲಿ ವ್ಯತಿರಿಕ್ತ ಮನೋಭಾವ ಬೆಳೆದಿರುವುದು ಕಳವಳಕಾರಿ ಎಂದು ಹೇಳಿದರು.
ಇಡೀ ವೈದ್ಯಕೀಯ ಕ್ಷೇತ್ರದಲ್ಲಿ ಆದರಣೀಯ ಗುಣಗಳನ್ನು ಅಳವಡಿಸಿಕೊಂಡು ಸೇವೆಗೆ ಪ್ರಥಮ ಆದ್ಯತೆ ನೀಡಿದಾಗಲೇ ಸಾರ್ಥಕವಾಗುತ್ತದೆ. ತಮ್ಮ ಬಳಿ ಬರುವ ರೋಗಿಗಳನ್ನು ಮಾನವೀಯತೆಯಿಂದ ಕಂಡು ಹಣಕ್ಕೆ ಆಸೆ ಪಡದೆ ಚಿಕಿತ್ಸೆ ನೀಡಬೇಕು ಎಂದು ಸಲಹೆ ನೀಡಿದರು.
ಉಡುಪಿಯ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ಜನರ ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿ ಆಗಿವೆ. ಬಡಜನತೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ತಜ್ಞ ವೈದ್ಯರು ಲಭ್ಯವಿದ್ದಾಗ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ನಾರಾಯಣ ಹೃದಯಾಲಯದ ವೈದ್ಯಕೀಯ ನಿರ್ದೇಶಕ ಡಾ.ಎಂ.ಎನ್.ರವಿ ಮಾತನಾಡಿ, ರೋಗಿಗಳೊಂದಿಗೆ ವೈದ್ಯರು ಹೆಚ್ಚು ಹೊತ್ತು ಮಾತನಾಡಿದಷ್ಟು ರೋಗಿಗಳಲ್ಲಿ ಆತ್ಮವಿಶ್ವಾಸ ಬೆಳೆಯುತ್ತದೆ. ಜತೆಗೆ ಕಾಯಿಲೆ ಬಗ್ಗೆ ವೈದ್ಯರಿಗೂ ಸ್ಪಷ್ಟತೆ ಸಿಗುತ್ತದೆ. ಇದರಿಂದಾಗಿ ಅಗತ್ಯ ಚಿಕಿತ್ಸೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ನೀಡಲು ಸಹಾಯವಾಗುತ್ತದೆ. ಹೀಗಾಗಿ ವೈದ್ಯರು ಸಾಧ್ಯವಾದಷ್ಟು ವಿವರವಾಗಿ ರೋಗಿಗಳೊಂದಿಗೆ ಸಂವಹನ ನಡೆಸಬೇಕು ಎಂದು ಸಲಹೆ ನೀಡಿದರು.
ನಾರಾಯಣ ಹೃದಯಾಲಯದ ವೈದ್ಯರು 120 ರೋಗಿಗಳಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಿದರು. ಶಿಬಿರದಲ್ಲಿ ಮಧುಮೇಹ, ರಕ್ತದೊತ್ತಡ , ಇಸಿಜಿ ಮತ್ತು ಇಕೋ ಸೇರಿದಂತೆ ಸಾಮಾನ್ಯ ಆರೋಗ್ಯ ತಪಾಸಣೆಗಳನ್ನು ನಡೆಸಲಾಯಿತು.
ವಿಶ್ರಾಂತ ಕುಲಪತಿ ಪ್ರೊ.ಪದ್ಮಾಶೇಖರ್, ನಗರಪಾಲಿಕ ಸದಸ್ಯ ಮಾ.ವಿ.ರಾಮಪ್ರಸಾದ್, ಹಿರಿಯ ಸಮಾಜ ಸೇವಕ ಕೆ.ರಘುರಾಮ್, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಹೇಮಾ ನಂದೀಶ್, ನಗರಪಾಲಿಕೆ ಮಾಜಿ ಸದಸ್ಯ ಎಂ.ಡಿ.ಪಾರ್ಥಸಾರಥಿ, ಕೆಪಿಸಿಸಿ ಸದಸ್ಯ ನಜರ್‌ಬಾದ್ ನಟರಾಜ್, ಕೆ.ಆರ್.ಬ್ಯಾಂಕ್ ಉಪಾಧ್ಯಕ್ಷ ಬಸವರಾಜ ಬಸಪ್ಪ, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷ ಅಪೂರ್ವ ಸುರೇಶ್, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಮುಖಂಡರಾದ ಅಜಯ್ ಶಾಸ್ತ್ರಿ, ಜಯರಾಮ್, ದೂರ ರಾಜಣ್ಣ, ಸುಚೇಂದ್ರ, ಚಕ್ರಪಾಣಿ, ಕನಕಮೂರ್ತಿ, ಜಗದೀಶ್ ಇತರರು ಇದ್ದರು.