ಕೆಲ ಸಣ್ಣಪುಟ್ಟ ಲೋಪದಿಂದ ಅಡಚಣೆ :ಶಿವಲಿಂಗೇಗೌಡ

ಕೆಲ ಸಣ್ಣಪುಟ್ಟ ಲೋಪದಿಂದ ಅಡಚಣೆ :ಶಿವಲಿಂಗೇಗೌಡ
Published on

ಹಾಸನ: ಹಾಸನಂಬ ಜಾತ್ರಾ ಮಹೋತ್ಸವದಲ್ಲಿ ಸ್ವಲ್ಪ ಸಣ್ಣಪುಟ್ಟ ಲೋಪ ಮತ್ತು ಆಡಚಣೆಯಿಂದ ಕೆಲ ಸಮಸ್ಯೆಗಳಾಗಿದ್ದು, ಇದಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ. ಮುಂದಿನ ದಿನಗಳಲ್ಲಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಇನ್ನು ಉತ್ತಮ ರೀತಿಯಲ್ಲಿ ಉತ್ಸವವನ್ನು ನಡೆಸಲಾಗುವುದು ಎಂದು ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು.

ಈ ಬಾರಿ ಉತ್ಸವದಲ್ಲಿ ದೇವಾಲಯಕ್ಕೆ 9ಕೋಟಿಗೂ ಅಧಿಕ ಆದಾಯ ಬಂದಿದ್ದು, ರಾಜ್ಯದ ನಾನಾ ಭಾಗದಿಂದ ಭಕ್ತರು ಆಗಮಿಸಿದ್ದಾರೆ. ಅವರಿಗೆ ಧನ್ಯವಾದ ಅರ್ಪಿಸಲಾಗುವುದು. ಹಾತನಾಂಬೆ ದೇವಿ ಚಿಕ್ಕ ಜಾಗದಲ್ಲಿ ನೆಲೆಸಿದ್ದು, ಈ ಹಿಂದೆ ಇಷ್ಟು ಜನರು ಆಗಮಿಸುತ್ತಿರಲಿಲ್ಲ, ಕಳೆದ ಎರಡು ವರ್ಷಗಳಿಂದ ಭಕ್ತರ ಆಗಮನ ಹೆಚ್ಚಾಗುತ್ತಿದೆ ಎಂದು ಹೇಳಿದರು.

ಜಿಲ್ಲೆಯ ಅಧಿಕಾರಿಗಳ ತಂಡ ಹಗಲಿರಲು ಎನ್ನದೆ ಶಕ್ತಿ ಮೀರಿ ಕೆಲಸ ಮಾಡಿದ್ದಾರೆ. ಕೆಲ ಭಿನ್ನಾಭಿಪ್ರಾಯಗಳು ಮತ್ತು ಸಮಸ್ಯೆ ಆಗಿರುವುದಕ್ಕೆ ಬೇಸರವಿದೆ. ಮುಂದಿನ ವರ್ಷ ಎಲ್ಲಾ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಂಡು ವಿಜೃಂಭಣೆಯಿಂದ ಉತ್ಸವವನ್ನ ಆಯೋಜನೆ ಮಾಡಲಾಗುವುದು. ಜಿಲ್ಲೆಯ ಇತಿಹಾಸದಲ್ಲಿ ಇಷ್ಟೊಂದು ಜನರು ಆಗಮಿಸಿದ್ದಾರೆ ಇದರಿಂದ ಭರತ ಖಂಡಕ್ಕೆ ದೇವಿಯ ಶಕ್ತಿಯನ್ನ ತೋರಿಸಲು ಶ್ರಮ ಪಡೋಣ ಹೇಳಿದರು.

ದೇವಸ್ಥಾನದ ವಿಚಾರದಲ್ಲಿ ರಾಜಕೀಯ ಬೇಡ, ಭೇದಭಾವ ಮಾಡುವವರನ್ನು ಹಾಸನಾಂಬೆ ನೋಡಿಕೊಳ್ಳುತ್ತಾಳೆ. ಜಿಲ್ಲಾಧಿಕಾರಿಗಳು ಕೆಲ ವಿಚಾರದಲ್ಲಿ ನೋವಿನಿಂದ ಮಂಕಾಗಿದ್ದಾರೆ. ಅದೇ ರೀತಿ ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಬೇಜಾರು ಮಾಡಿಕೊಂಡಿದ್ದರೆ, ಅವರನ್ನು ಕೂಡ ಸಮಾಧಾನ ಪಡಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರು ಪಾಸುಗಳನ್ನು ಮನೆಗೆ ತೆಗೆದುಕೊಂಡು ಹೋಗಿಲ್ಲ. ದೊಡ್ಡ ಜಾತ್ರೆ ಎಂದ ಮೇಲೆ ಲೋಪ ದೋಷಗಳು ಸಹಜ. ಅದನ್ನು ಮನಸ್ಸಿಗೆ ಹಾಕಿಕೊಳ್ಳುವುದೇ ಎಲ್ಲರೂ ಉತ್ತಮವಾಗಿ ಮುಂದಿನ ವರ್ಷದಿಂದ ಕೆಲಸ ಮಾಡುವ ನಿಟ್ಟಿನಲ್ಲಿ ಗಮನಹರಿಸೋಣ ಎಂದು ಧೈರ್ಯ ತುಂಬಿದರು.

ನಂತರ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಮಾತನಾಡಿ, ಜಾತ್ರಾ ಮಹೋತ್ಸವವನ್ನು ಯಶಸ್ವಿಯಾಗಿ ನೆರವೇರಿಸಲು ಸಹಕರಿಸಿದಂತಹ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಎಲ್ಲರಿಗೂ ಕೂಡ ತುಂಬು ಹೃದಯದ ಧನ್ಯವಾದಗಳು ಎಂದು ಹೇಳಿದರು.

ದಕ್ಷಿಣ ವಲಯ ಐಜಿಪಿ ಡಾ.ಬೋರಲಿಂಗಯ್ಯ ಮಾತನಾಡಿ, ಹಾಸನಂಬ ಜಾತ್ರಾ ಮಹೋತ್ಸವ ಜಿಲ್ಲೆಯ ಜನರ ಪಾಲಿಗೆ ದಸರಾ ಇದ್ದಂತೆ. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ಸುಮಾರು 2 ಸಾವಿರ ಸಿಬ್ಬಂದಿಗಳನ್ನು ನಿಯೋಜಿಸಿ ಯಾವುದೇ ರೀತಿ ಅಹಿತಕರ ಘಟನೆ ನಡೆಯದಂತೆ ಶ್ರಮವಹಿಸಲಾಗಿದೆ. ನಮ್ಮ ಅಧಿಕಾರಿಗಳು ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅವರೆಲ್ಲರಿಗೂ ಕೂಡ ಧನ್ಯವಾದಗಳು ಮತ್ತು ಪೊಲೀಸರಿಗೆ ಸಹಕಾರಿಯಾಗುವಂತೆ ಸ್ಕೌಟ್ ಆಡ್ ಗೈಡ್ಸ್ , ಸೇವಾದಳ ಮತ್ತು ಎನ್‌ಸಿಸಿ ವಿದ್ಯಾರ್ಥಿಗಳು ಕೂಡ ಸಾಕಷ್ಟು ಶ್ರಮವಹಿಸಿ ಹಗಲಿರುಳು ಕೆಲಸ ಮಾಡಿದ್ದಾರೆ ಅವರಿಗೂ ಕೂಡ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net