ಕೆರೆಯಲ್ಲಿ ಸಾವಿರಾರು ಮೀನುಗಳ ಮಾರಣ ಹೋಮ:ಸ್ಥಳೀಯರು ಆಕ್ರೋಶ

ಕೆರೆಯಲ್ಲಿ ಸಾವಿರಾರು ಮೀನುಗಳ ಮಾರಣ ಹೋಮ:ಸ್ಥಳೀಯರು ಆಕ್ರೋಶ
Published on

ಹಾಸನ: ಕಾರ್ಖಾನೆಯಿಂದ ರಾಸಾಯನಿಕ ಮಿಶ್ರಿತ ನೀರನ್ನು ಕೆರೆಗೆ ಹರಿಸಿದ ಪರಿಣಾಮ ಶನಿವಾರ ಕೆರೆಯಲ್ಲಿದ್ದ ಸಾವಿರಾರು ಮೀನುಗಳು ಮೃತಪಟ್ಟಿರುವ ಘಟನೆ ನಗರದ ಹೊರವಲಯದಲ್ಲಿರುವ ಕೊಕ್ಕನಘಟ್ಟ ಗ್ರಾಮದಲ್ಲಿ ನಡೆದಿದೆ.
ಹನುಮಂತಪುರಕ್ಕೆ ಹೋಗುವ ದಾರಿ ಬಳಿ ಇರುವ ಕಾರ್ಖಾನೆಯಿಂದ ರಾಸಾಯನಿಕಯುಕ್ತ ನೀರನ್ನು ಹೊರ ಬಿಡುವ ನೀರು ಕೊಕ್ಕನಘಟ್ಟ ಗ್ರಾಮದ ಕೆರೆಗೆ ಬಂದು ಸೇರುತ್ತಿದೆ. ಈ ಗ್ರಾಮದ ದನ, ಕರುಗಳಿಗೂ ನೀರು ಕುಡಿಯಲು ಸಮಸ್ಯೆಯಾಗಿದೆ. ನೀರು ಕುಡಿದು ಪ್ರಾಣಿ ಪಕ್ಷಿಗಳು ಸಾಯುತ್ತಿವೆ. ಕಳೆದ 20 ವರ್ಷಗಳಿಂದಲೂ ಇಂತಹ ಸಮಸ್ಯೆ ಆಗುತ್ತಲೇ ಇದ್ದು, ಪರಿಸರ ಇಲಾಖೆ ಇತರೆ ಕಡೆ ಈ ಬಗ್ಗೆ ಅರ್ಜಿ ಕೊಟ್ಟರೇ ಕೆರೆ ನೀರು ಚೆನ್ನಾಗಿಯೇ ಇದೆ ಎಂದು ಕಾರ್ಖಾನೆ ಪರವಾಗಿಯೇ ಉತ್ತರ ಕೊಡುತ್ತಾರೆ ಹೊರತು ರೈತರ ಪರವಾಗಿ ಒಂದೇ ಒಂದು ವರದಿ ಕೊಡುವುದಿಲ್ಲ ಎಂದು ಗ್ರಾಮಸ್ಥರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಪ್ರಾಣಿ- ಪಕ್ಷಿಗಳು, ಜಲಚರಗಳು ಸಾಯುವುದರ ಜತೆಗೆ ಸುತ್ತಮುತ್ತ ಜನರು ಕಾಯಿಲೆಗಳಿಂದ ಬಳಲುತ್ತಿದ್ದು, ಅಧಿಕಾರಿಗಳು ಬಂದು ಪರಿಶೀಲಿಸಬೇಕು. ಯಾವುದೇ ಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ. ಕಾರ್ಖಾನೆಯವರು ದಬ್ಬಾಳಿಕೆಯಿಂದ ಕೆರೆಗೆ ರಾಸಾಯನಿಕ ಬಿಡುತ್ತಿದ್ದಾರೆ ಎಂದು ದೂರಿದರು. ಸಾವಿರಾರು ಮೀನುಗಳು ಸಾವನ್ನಪ್ಪಿ ಲಕ್ಷಾಂತರ ರೂ. ನಷ್ಟವಾಗಿದೆ. ಕೂಡಲೇ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಇದೇ ವೇಳೆ ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net