ಕೆರೆಯಲ್ಲಿ ಮುಳುಗಿ ಇಬ್ಬರ ಸಾವು

MAHEBOOB - Sharukh
Published on

ಔರಾದ್: ಸಂತಪುರ ಗ್ರಾಮದ ಕೆರೆಯಲ್ಲಿ ಮುಳುಗಿ ಇಬ್ಬರು ಗುರುವಾರ ಮೃತಪಟ್ಟಿದ್ದಾರೆ. ಗ್ರಾಮದ ಶಾರುಖ್ ನಯೂಮ್ (22) ಹಾಗೂ ಮಹೆಬೂಬ್ ರಸೂಲ್ಸಾಬ್(26) ಮೃತರು. ಕರೊನಾ ಹಿನ್ನೆಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸ ಮಾಡಲು ಹೋಗಿದ್ದ ವೇಳೆ ಅವಘಡ ಸಂಭವಿಸಿದೆ. ಕೆರೆಯಲ್ಲಿ ಹೂಳೆತ್ತುವ ಕೆಲಸಕ್ಕೆ 162 ಕೂಲಿ ಕಾಮರ್ಿಕರು ಹೋಗಿದ್ದರು. ಮಧ್ಯಾಹ್ನದ ವೇಳೆ ಊಟಕ್ಕೆ ಹೋಗುವ ಸಮಯದಲ್ಲಿ ಕೆರೆಯ ಒಂದು ಮೂಲೆಯಲ್ಲಿ ನೀರಿರುವ ಕಾರಣ ಕೈಕಾಲು ತೊಳೆದುಕೊಳ್ಳಲು ಇಳಿದಾಗ ಇವರಿಬ್ಬರು ಕಾಲು ಜಾರಿ ಬಿದ್ದು ಕೊನೆಯುಸಿರೆಳೆದಿದ್ದಾರೆ.
ಮೃತ ಯುವಕ ಶಾರುಖ್ ಹಲವು ವರ್ಷಗಳಿಂದ ದಿನಪತ್ರಿಕೆಗಳನ್ನು ಮನೆ ಮನೆಗೆ ಹಾಕುತ್ತ ವ್ಯಾಸಂಗ ಮಾಡುತ್ತಿದ್ದ. ಕಳೆದ ವರ್ಷ ಪಿಯುಸಿಯಲ್ಲಿ ಶೇ.92 ಅಂಕ ಪಡೆಯುವ ಮೂಲಕ ತಾಲೂಕಿಗೆ ಕೀರ್ತಿ ತಂದಿದ್ದ. ಸದ್ಯ ಬೀದರ್ ಕರ್ನಾಟಕ ಕಾಲೇಜಿನಲ್ಲಿ ಪದವಿ ಓದುತ್ತಿದ್ದ. ಲಾಕ್ಡೌನ್ ಹಿನ್ನೆಲೆಯಲ್ಲಿ ತಂದೆ ಇಲ್ಲದ ಈತ ಕುಟುಂಬ ನಿರ್ವಹಣೆಗಾಗಿ ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡಲು ಹೋದಾಗ ದುರಂತ ಸಂಭವಿಸಿದೆ. ಇನ್ನೊಬ್ಬ ಮೃತ ಮಹೆಬೂಬ್ಗೆ ಮದುವೆಯಾಗಿದ್ದು, ಮೂವರು ಮಕ್ಕಳಿದ್ದಾರೆ. ಸಾವಿನ ಸುದ್ದಿ ತಿಳಿದು ಸ್ಥಳಕ್ಕೆ ಸಾವಿರಾರು ಜನ ಕೆರೆ ದಡದಲ್ಲಿ ಸೇರಿದ್ದರು. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.
ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು, ಗ್ರಾಮಸ್ಥರು ಸೇರಿ ಎರಡು ಶವಗಳನ್ನು ಹೊರತೆಗಿದಿದ್ದಾರೆ. ತಹಸೀಲ್ದಾರ್ ಚಂದ್ರಶೇಖರರಾವ, ತಾಪಂ ಇಒ ಮಾಣಿಕರಾವ ಪಾಟೀಲ್, ಸಿಪಿಐ ರಾಘವೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಂತ್ಯಸಂಸ್ಕಾರಕ್ಕೆ ನೆರವು: ಮೃತ ಇಬ್ಬರ ಅಂತ್ಯಸಂಸ್ಕಾರಕ್ಕಾಗಿ ತಲಾ 10 ಸಾವಿರ ರೂ. ಸಹಾಯಧನವನ್ನು ಸಂತಪುರ ಪಿಡಿಒ ಅನೀಲಕುಮಾರ ನೀಡಿದರು. ತಾಪಂ ಸಹಾಯಕ ನಿರ್ದೇಶಕ ಶಿವಾನಂದ ಔರಾದೆ, ಸಹಾಯಕ ಯೋಜನಾಧಿಕಾರಿ ಶಿವಾನಂದ ಘಾಟೆ, ಪಿಎಸ್ಐ ಪ್ರಭಾಕರ ಪಾಟೀಲ್, ಕ್ರೈಂ ಪಿಎಸ್ಐ ಸುವರ್ಣ, ಪಿಡಿಒ ಸಂತೋಷ ಪಾಟೀಲ್, ಮುಖಂಡರಾದ ಮಂಜು ಸ್ವಾಮಿ, ರಾಘವೇಂದ್ರ ಕೋಳಿ, ಸಂತೋಷ ಮಡಿವಾಳ, ಪೇದೆಗಳಾದ ಸುನೀಲ ಕೋರಿ, ಜ್ಞಾನೇಶ್ವರ, ವೆಂಕಟ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net