

ನಂದಗುಡಿ: ಕೆರೆಯಂಗಳದ ರಸ್ತೆ ಸೇರಿ ಖಾಲಿ ಪ್ರದೇಶಗಳಲ್ಲಿ ತ್ಯಾಜ್ಯ ವಿಲೇವಾರಿ, ಆ ಪ್ರದೇಶದ ಸುತ್ತೆಲ್ಲ ಅನುಪಯುಕ್ತ ವಸ್ತುಗಳು, ಮಾಂಸ ತ್ಯಾಜ್ಯ, ರೆಕ್ಕೆ ಪುಕ್ಕದ ಮೂಟೆಗಳು, ಪ್ರಾಣಿಗಳ ಅಸ್ಥಿಪಂಜರಗಳೇ ಕಂಡುಬರುತ್ತವೆ. ಮಾಂಸ ತ್ಯಾಜ್ಯ ಕೊಳೆತು ಇಡೀ ಪ್ರದೇಶದಲ್ಲಿ ದುರ್ನಾತ ಹಬ್ಬಿದೆ. ಹಾಗಾಗಿ ಈ ಪ್ರದೇಶಕ್ಕೆ ಬರುತ್ತಲೇ ಗ್ರಾಮಸ್ಥರು ಅನಿವಾರ್ಯವಾಗಿ ಮೂಗು ಹಿಡಿದುಕೊಂಡು ಓಡಾಡುತ್ತಾರೆ.
ನಂದಗುಡಿ ಹೋಬಳಿಯ ಎನ್. ಹೊಸಹಳ್ಳಿಯ ಕೆರೆ ಪ್ರದೇಶಕ್ಕೆ ನೆರೆಯ ಆಂಧ್ರಪ್ರದೇಶ, ಬೆಂಗಳೂರು ನಗರ ಸೇರಿ ವಿವಿಧ ಸ್ಥಳಗಳಿಂದ ಮಾಂಸ ತ್ಯಾಜ್ಯವನ್ನು ಲಾರಿಗಳ ಮೂಲಕ ಡ್ರಮ್‌ಗಳಲ್ಲಿ ತಂದು ವಿಲೇವಾರಿ ಮಾಡಲಾಗುತ್ತಿದೆ. ಈಗ ಕೆರೆಯಂಗಳದಿಂದ ಖಾಸಗಿ ಜಮೀನಿನವರೆಗೂ ಈ ಹಾವಳಿ ವಿಸ್ತರಿಸಿದೆ.
ಸಾಂಕ್ರಾಮಿಕ ರೋಗ ಭೀತಿ: ಸ್ಥಳೀಯರ ಕುಮ್ಮಕ್ಕಿನಿಂದ ಸರ್ಕಾರಿ ಕೆರೆಯಂಗಳ, ಕಾಲುವೆ, ಖಾಸಗಿ ಜಮೀನುಗಳಲ್ಲಿ ಮಾಂಸದ ತ್ಯಾಜ್ಯವನ್ನು ವಿಗಂಡನೆ ಮಾಡಲಾಗುತ್ತಿದೆ. ಮಾಂಸದಿಂದ ಹರಿಯುವ ರಕ್ತ, ರೆಕ್ಕೆ ಪುಕ್ಕಗಳು ಕೆರೆ ಸೇರುತ್ತಿವೆ. ಇದರಿಂದಾಗಿ ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಆವರಿಸಿದೆ.
ನೆಲಕಚ್ಚುತ್ತಿವೆ ಬೆಳೆಗಳು: ಎನ್. ಹೊಸಹಳ್ಳಿಯ ಪ್ರದೇಶದ ಜನರು ರೇಷ್ಮೆ, ಕೃಷಿ, ಹೈನುಗಾರಿಕೆಯನ್ನು ಅವಲಂಬಿಸಿದ್ದಾರೆ. ಆದರೆ, ಮಾಂಸ ತ್ಯಾಜ್ಯ ವಿಲೇವಾರಿಯಿಂದ ಪರಿಸರ ಮಾಲಿನ್ಯ ಉಂಟಾಗಿದ್ದು, ಬೆಳೆಗಳು ನೆಲಕಚ್ಚುತ್ತಿವೆ. ಜಾನುವಾರುಗಳಿಗೆ ನಾನಾ ಬಗೆಯ ರೋಗ ತಗಲುತ್ತಿದ್ದು, ಹೈನೋದ್ಯಮಕ್ಕೆ ಭಾರಿ ಹಿನ್ನೆಡೆ ಉಂಟಾಗಿದೆ. ರೇಷ್ಮೆ ಬೆಳೆಗಳು ನಾನಾ ಬಗೆಯ ರೋಗಕ್ಕೆ ತುತ್ತಾಗುತ್ತಿವೆ. ಇದೆಲ್ಲವನ್ನೂ ತಡೆಯಬೇಕಾದ ಅಧಿಕಾರಿಗಳು ಜಾಣಕುರುಡಿಗೆ ತುತ್ತಾಗಿದ್ದಾರೆ!
ಜೀವಭಯದಲ್ಲಿ ಜನತೆ: ಕೊಳೆತ ಮಾಂಸಕ್ಕಾಗಿ ಕಾಗೆ, ಹದ್ದು, ಬಿಡಾಡಿ ನಾಯಿಗಳ ಹಿಂಡು ಇಡೀ ಪ್ರದೇಶವನ್ನು ಆಕ್ರಮಿಸಿಕೊಂಡಿವೆ. ಬೀದಿನಾಯಿಗಳು ಕಿತ್ತಾಡಿಕೊಳ್ಳುವಾಗ ಜನರು ಜೀವವನ್ನೇ ಕೈಯಲ್ಲಿ ಇಟ್ಟುಕೊಂಡು ಸುತ್ತಾಡುವ ಸ್ಥಿತಿ ಇದೆ. ದುರ್ವಾಸನೆಯಿಂದಾಗಿ ಜನರಲ್ಲಿ ಕೆಮ್ಮು, ಅಸ್ತಮಾ ಸೇರಿ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.
ಹಣದಾಸೆಗಾಗಿ ಗ್ರಾಮದ ಪರಿಸರ ಹಾಳು ಮಾಡಲಾಗುತ್ತಿದೆ. ಸ್ಥಳೀಯ ರಾಜಕಾಣಿಗಳ ಕುಮ್ಮಕ್ಕಿನಿಂದ ಕೆರೆಯಂಗಳದ ಅಕ್ಕಪಕ್ಕದ ಜಮೀನುಗಳಲ್ಲಿ ಮಾಂಸದ ತ್ಯಾಜ್ಯ ಸುರಿಯಲಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಪರಿಸರ ಕಾಪಾಡುವ ಜವಾಬ್ದಾರಿ ಯಾರಿಗೂ ಬೇಡವಾಗಿದೆ. ಅತೀಫ್ ಬೇಗ್, ಎನ್ ಹೊಸಹಳ್ಳಿ ನಿವಾಸಿ ಎನ್.ಹೊಸಹಳ್ಳಿ ಹೊರವಲಯದಲ್ಲಿ ಅಕ್ರಮವಾಗಿ ಮಾಂಸ ತ್ಯಾಜ್ಯ ವಿಲೇವಾರಿ ಮಾಡುತ್ತಿರುವ ಸಂಗತಿ ಗಮನಕ್ಕೆ ಬಂದಿಲ್ಲ. ಪಿಡಿಒಗೆ ತಿಳಿಸಿ ಪರಿಶೀಲಿಸಿದ ಬಳಿಕ ಪಂಚಾಯಿತಿಯಿಂದ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ಠಾಣೆಗೆ ದೂರು ನೀಡಲಾಗುವುದು. ಶ್ರೀನಾಥ್‌ಗೌಡ, ಹೊಸಕೋಟೆ ತಾಪಂ ಇಒ