ಕೆರೆಯಂತಾದ ವಸ್ತು ಪ್ರದರ್ಶನ ಆವರಣ

Exbihition (3)web
Published on

ಮೈಸೂರು: ನಾಡಹಬ್ಬ ದಸರಾಕ್ಕೆ ಬಿಡುವು ನೀಡಿದ್ದ ಮಳೆ ಭಾನುವಾರ ರಾತ್ರಿ ಧಾರಾಕಾರವಾಗಿ ಸುರಿದಿದ್ದು, ವಸ್ತು ಪ್ರದರ್ಶನ ಆವರಣದಲ್ಲಿರುವ ಅಮ್ಯೂಸ್‌ಮೆಂಟ್ ಪಾರ್ಕ್ ಆವರಣ ಕೆರೆ ಅಂಗಳದಂತಾಗಿದೆ.
ಸೋಮವಾರ ಬೆಳಗ್ಗೆವರೆಗೆ ಸುರಿದ ಮಳೆಯಿಂದ ತಗ್ಗು ಪ್ರದೇಶಕ್ಕೆ ನೀರು ನುಗ್ಗಿತ್ತು. ವಸ್ತುಪ್ರದರ್ಶನ ಆವರಣದ ತಗ್ಗು ಪ್ರದೇಶದಲ್ಲಿ ನೀರು ನಿಂತಿತ್ತು. ಅಲ್ಲದೆ, ಅಮ್ಯೂಸ್‌ಮೆಂಟ್ ಪಾರ್ಕ್, ಆಹಾರ ಮಳಿಗೆಗಳು, ಅರಣ್ಯ ಇಲಾಖೆಯ ಮಳಿಗೆ, ಕೃಷಿ ಇಲಾಖೆ ಮಳಿಗೆ, ಕನ್ನಡ ಕಾರಂಜಿ ಕಟ್ಟಡ ಸೇರಿದಂತೆ ಹಲವೆಡೆ ನೀರು ನಿಂತಿತ್ತು. ಮಧ್ಯಾಹ್ನ ಕೊಂಚ ಬಿಸಿಲು ಬಂದರೂ ಮಳೆಯಿಂದ ನೆಲ ಕೆಸರು ಮಯವಾಗಿತ್ತು. ಇದರಿಂದ ವಸ್ತು ಪ್ರದರ್ಶನ ನೋಡಲು ಬಂದವರು ತೊಂದರೆ ಅನುಭವಿಸಿದರು.
ಸತತ ಮಳೆಯಿಂದ ಕುಕ್ಕರಹಳ್ಳಿಕೆರೆಯ ವಾಯು ವಿಹಾರದ ಮಾರ್ಗದಲ್ಲಿ ಮರ ಹಾಗೂ ರೆಂಬೆ ಕೊಂಬೆಗಳು ಧರೆಗುರಳಿದ್ದವು. ಇದರಿಂದ ಬೆಳಗ್ಗೆ ವಾಯು ವಿಹಾರಕ್ಕೆ ಬಂದವರು ಮುಂದೆ ಹೋಗಲು ಸಾಧ್ಯವಾಗದೆ ವಾಪಸ್ ತೆರಳಿದರು. ಇಡೀ ಜಿಲ್ಲೆಯಲ್ಲಿ ಮಳೆಯಾಗಿದ್ದು, ನಾಗನಹಳ್ಳಿ ಹವಾಮಾನ ಕೇಂದ್ರದಲ್ಲಿ 47.9 ಮಿಲಿ ಮೀಟರ್ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net