

ಸುಂಟಿಕೊಪ್ಪ: ಸಮೀಪದ ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊರೂರು ಗ್ರಾಮದಲ್ಲಿ ಪತಿ, ಪತ್ನಿಯ ನಡುವೆ ಕಲಹ ಉಂಟಾಗಿ ಪತಿ ಪತ್ನಿಯನ್ನು ಕೆರೆಗೆ ತಳ್ಳಿ, ತಾನೂ ನೀರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅದೃಷ್ಟವಶಾತ್ ಸ್ಥಳೀಯರು ಪತ್ನಿಯನ್ನು ರಕ್ಷಿಸಿದ್ದಾರೆ.
ಮೂಲತಃ ಸುಳ್ಯದ ನಿವಾಸಿಗಳಾದ ವಿಜಯ (32), ಪತ್ನಿ ಸೌಮ್ಯಾ(19) ಕೂಲಿ ಕಾರ್ಮಿಕರಾಗಿ ಕೆದಕಲ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮುಕ್ಕಾಟಿ ಸಂಜು ಪೊನ್ನಪ್ಪ ಅವರ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಭಾನುವಾರ ಬೆಳಗ್ಗೆ ಪತಿ, ಪತ್ನಿಯ ನಡುವೆ ಮಾತಿನ ಚಕಮಕಿ ಉಂಟಾಗಿ ತಾರಕಕ್ಕೇರಿದೆ. ಈ ವೇಳೆ ಕೋಪಗೊಂಡ ಪತಿ ತೋಟದಲ್ಲಿಯೇ ಇದ್ದ ಕೆರೆಗೆ ಪತ್ನಿಯನ್ನು ತಳ್ಳಿ ತಾನು ಸಹ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸೌಮ್ಯಾ ಅವರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಈ ಸಂಬಂಧ ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಶ್ರೀಧರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಲಾಗಿದೆ. ದಂಪತಿಗೆ 5 ತಿಂಗಳ ಮಗುವಿದೆ.