ಕೆರೆಗೆ ಹಾರಿ ಇಂಜಿನಿಯರ್​ ಆತ್ಮಹತ್ಯೆ?

28
Published on

ಕುಣಿಗಲ್​: ಪಟ್ಟಣದ ದೊಡ್ಡಕೆರೆಗೆ ಗುರುವಾರ ಬೆಳಗ್ಗೆ ಇಂಜಿನಿಯರ್​ವೊಬ್ಬರು ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದ್ದು, ತಾಲೂಕಿನ ಕೊತ್ತಗೆರೆ ಹೋಬಳಿ ಸೊಬಗಾನಹಳ್ಳಿ ಗ್ರಾಮದ ವಾಸಿ ಬಿ.ಟಿ.ಸುಮಾ (22) ನಾಪತ್ತೆಯಾದವರೆಂದು ಶಂಕಿಸಲಾಗಿದೆ. ಬೆಂಗಳೂರಿನ ಮಡಿವಾಳದ ಖಾಸಗಿ ಕಾರ್ಖಾನೆಯ ಉದ್ಯೋಗಿಯಾಗಿರುವ ಸುಮಾ ಗ್ರಾಮದಿಂದ ಗುರುವಾರ ಬೆಳಗ್ಗೆ 7 ಗಂಟೆಗೆ ಕುಣಿಗಲ್​ನಿಂದ ಬೆಂಗಳೂರಿಗೆ ಸಾರಿಗೆ ಸಂಸ್ಥೆ ಬಸ್​ನಲ್ಲಿ ಹೋಗಿದ್ದಾರೆ. ಆದರೆ, ಮತ್ತೆ ಬೆಳಗ್ಗೆ 11 ಗಂಟೆಗೆತುರುವೇಕೆರೆ ಬಸ್​ನಲ್ಲಿ ಕುಣಿಗಲ್​ಗೆ ಬಂದಿರುವುದು ಸಾರಿಗೆ ಸಂಸ್ಥೆ ಬಸ್​ ಟಿಕೆಟ್​ನಿಂದ ದೃಢವಾಗಿದೆ. ಸುಮಾ ಅವರ ಬ್ಯಾಗ್​, ಆಧಾರ್​ ಕಾರ್ಡ್​, ಮೊಬೆಲ್​ ಹಾಗೂ ಚಪ್ಪಲಿ ಕುಣಿಗಲ್​ ದೊಡ್ಡಕೆರೆಯ ಏರಿಯ ಸತ್ಯ ಗಣಪತಿ ದೇವಾಲಯ ಮುಂಭಾಗದ ಜಾಕ್​ ವೆಲ್​ ಬಳಿ ಸಿಕ್ಕಿದ್ದು, ಸುಮಾ ಕೆರೆಗೆ ಹಾರಿದ್ದಾರೆ ಎನ್ನಲಾಗುತ್ತಿದೆ. ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸಂಶಯ ಮೇರೆಗೆ ಅಗ್ನಿಶಾಮಕ ಸಿಬ್ಬಂದಿ ಬೋಟ್​ ಸಹಾಯದಿಂದ ಕೆರೆಯಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದು, ರಾತ್ರಿಯಾದ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಶುಕ್ರವಾರ ಬೆಳಗ್ಗೆ ಮತ್ತೆ ಶೋಧ ಕಾರ್ಯಾಚರಣೆ ಮುಂದುವರಿಯಲಿದೆ. ಸ್ಥಳಕ್ಕೆ ಶಾಸಕ ಡಾ.ಎಚ್​.ಡಿ.ರಂಗನಾಥ್​, ಕುಣಿಗಲ್​ ವೃತ್ತ ನಿರೀಕ ಎಸ್​.ಬಿ.ನವೀನ್​ಗೌಡ ಭೇಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net