

ಸಾಗರ: ಸರ್ಕಾರದ ಸಹಾಯ ಇಲ್ಲದೇ ಗ್ರಾಮಸ್ಥರೇ ಸ್ವಯಂ ಪ್ರೇರಿತವಾಗಿ ಕೆರೆ ಅಭಿವೃದ್ಧಿಪಡಿಸುವುದು ಸಣ್ಣ ಕೆಲಸವಲ್ಲ. ಎಲ್ಲರೂ ಸೇರಿ ಬಂಗಾರಮ್ಮನ ಕೆರೆ ಮತ್ತು ಆನೆಸೊಂಡಿಲು ಕೆರೆ ಮರು ನಿರ್ಮಾಣ ಮಾಡಿರುವುದು ಇತರರಿಗೆ ಮಾದರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ತಾಲೂಕಿನ ಚಿಪ್ಪಳಿ-ಲಿಂಗದಹಳ್ಳಿಯಲ್ಲಿ ಜೀವಜಲ ಕಾರ್ಯಪಡೆ ಹಾಗೂ ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ಮರು ನಿರ್ಮಾಣ ಮಾಡಿರುವ ಬಂಗಾರಮ್ಮನ ಕೆರೆ ಮತ್ತು ಆನೆಸೊಂಡಿಲು ಕೆರೆಯನ್ನು ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ತಾಲೂಕಿನಲ್ಲಿ ಸ್ವಯಂಪ್ರೇರಿತವಾಗಿ ಅನೇಕ ಗ್ರಾಮಗಳಲ್ಲಿ ಗ್ರಾಮಸ್ಥರೇ ಮುತುವರ್ಜಿ ವಹಿಸಿ ಕೆಲವು ಕಡೆಗಳಲ್ಲಿ ಕೆರೆಗಳ ಮರು ನಿರ್ಮಾಣ ಮಾಡಿದ್ದಾರೆ. ಅಲ್ಲಿಗೂ ಭೇಟಿ ನೀಡಿ ಅದನ್ನು ಪರಿಶೀಲಿಸಿ ಇತರರಿಗೆ ಇಂತಹ ಕೆಲಸಗಳಲ್ಲಿ ತೊಡಗಿಕೊಳ್ಳಲು ಪ್ರೇರೆಪಿಸಲಾಗುವುದು ಎಂದು ತಿಳಿಸಿದರು.
ಎರಡು ಕೆರೆಗಳ ಸುತ್ತ ರಿವೀಟ್ವೆುಂಟ್ ಮಾಡಲು ಗ್ರಾಮಸ್ಥರು ಮನವಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಉದ್ಯೋಗಖಾತ್ರಿ ಯೋಜನೆಯಡಿ ಅಂದಾಜು ತಯಾರಿಸಲು ತಾಪಂ ಇಒಗೆ ಸೂಚಿಸಿದರು. ಇಂತಹ ಕೆರೆಗಳನ್ನು ಶಾಶ್ವತವಾಗಿ ಉಳಿಸಿಕೊಳ್ಳುವತ್ತ ಸರ್ಕಾರ ಗಮನ ಹರಿಸುತ್ತದೆ. ಗ್ರಾಮಾಂತರ ಪ್ರದೇಶಗಳ ಕೆರೆಗಳನ್ನು ಉದ್ಯೋಗಖಾತ್ರಿ ಯೋಜನೆಯಡಿ ಪುನಶ್ಚೇೕತನಗೊಳಿಸಲು, ಹೂಳು ತೆಗೆಯಲು ಅಗತ್ಯ ಯೋಜನೆ ರೂಪಿಸಲಾಗಿದೆ. ಇದರಿಂದ ಜಲಮೂಲ ಅಭಿವೃದ್ಧಿಡಿಸುವ ಸರ್ಕಾರದ ಉದ್ದೇಶ ಈಡೇರಿದಂತೆ ಆಗುತ್ತದೆ ಎಂದರು.
ಜೀವಜಲ ಕಾರ್ಯಪಡೆ ಹಾಗೂ ಗ್ರಾಮಸ್ಥರಿಂದ ಸಚಿವರಿಗೆ ಎರಡೂ ಕೆರೆಗಳ ಸುತ್ತಲೂ ಕಲ್ಲುಕಟ್ಟಣೆ ನಿರ್ವಿುಸಿಕೊಡಬೇಕು. ಸಾಗರದ ಗಣಪತಿ ಕೆರೆಯ ಸಂಪರ್ಕ ಕೆರೆಗಳನ್ನು ಬಂಗಾರಮ್ಮನ ಕೆರೆ ಮಾದರಿಯಲ್ಲಿ ಪುನಶ್ಚೇತನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದರು. ಸಚಿವ ಈಶ್ವರಪ್ಪ ಕೆರೆಯ ದಂಡೆಯಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶಾಸಕ ಹರತಾಳು ಹಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ತಾಲೂಕು ಅಧ್ಯಕ್ಷ ಲೋಕನಾಥ್ ಬಿಳಿಸಿರಿ, ಪ್ರಮುಖರಾದ ಪ್ರಸನ್ನ ಕೆರೆಕೈ, ಜೀವಜಲ ಕಾರ್ಯಪಡೆಯ ಅಖಿಲೇಶ್ ಚಿಪ್ಳಿ, ಎಲ್.ವಿ.ಅಕ್ಷರ, ಕುಂಟಗೋಡು ಸೀತಾರಾಮ್ ಎಲ್.ವಿ.ಸತೀಶ್, ಸುರೇಶ್ ಗೌಡ, ಮಂಜಪ್ಪ, ಜಿಪಂ ಸಿಇಒ ವೈಶಾಲಿ, ತಾಪಂ ಇಒ ಪುಷ್ಪಾ ಕಮ್ಮಾರ್, ಆರೋಗ್ಯ ಇಲಾಖೆ ನೌಕರರ ಒಕ್ಕೂಟದ ಜಿಲ್ಲಾಧ್ಯಕ್ಷ ಮ.ಸ.ನಂಜುಂಡಸ್ವಾಮಿ ಇದ್ದರು.