ಕೆರೆಗಳ ಒತ್ತುವರಿ ತೆರವುಗೊಳಿಸಿ

DC MEETING
Published on

ಬೀದರ್: ಜಿಲ್ಲೆಯ ಎಲ್ಲಾದರೂ ಕೆರೆಗಳ ಒತ್ತುವರಿಯಾಗಿರುವುದು ಕಂಡುಬಂದರೆ ಮುಲಾಜಿಲ್ಲದೆ ಸಂಬಂಧಿಸಿದವರಿಗೆ ನೋಟಿಸ್ ನೀಡಿ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ರಾಮಚಂದ್ರನ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ರಾಷ್ಟ್ರೀಯ ಹಸಿರು ನ್ಯಾಯಪೀಠ ನೀಡಿದ ಆದೇಶದಂತೆ ಕೈಗೊಂಡ ಕ್ರಮಗಳ ಕುರಿತು ಚರ್ಚಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಏರ್ಪಡಿಸಿದ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ಮಟ್ಟದ ಸಭೆಯಲ್ಲಿ ಮಾತನಾಡಿ, ಕೆರೆಗಳ ಒತ್ತುವರಿ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಕೆರೆಗಳ ಪೈಕಿ ಯಾವ್ಯಾವುದು ಒತ್ತುವರಿಯಾಗಿದೆ ಎಂಬ ಬಗ್ಗೆ ಮಾಹಿತಿ ನೀಡಬೇಕು. ಕೆರೆಗಳು ಒತ್ತುವರಿಯಾಗಿರುವುದು ಕಂಡುಬಂದಲ್ಲಿ ಅಂಥವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಸೂಚಿಸಿದರು.

ಗ್ರಾಮ ಪಂಚಾಯಿತಿಗಳಲ್ಲಿ ಕೆರೆಗಳ ನೀರು ಬಳಕೆದಾರರ ಸಂಘ ರಚನೆ ಬಗ್ಗೆ ಮುತುವರ್ಜಿ ವಹಿಸಬೇಕು. ಜಿಪಂ ಸುಪರ್ದಿಯಲ್ಲಿನ ಕೆರೆಗಳಿಗೆ ಸಂಬಂಧಿಸಿದಂತೆ ಇದುವರೆಗೆ ಬಾಕಿ ಉಳಿದ ಗ್ರಾಪಂಗಳಲ್ಲಿ ನೀರು ಬಳಕೆದಾರರ ಸಂಘ ರಚನೆಯಾಗಬೇಕು. ಗ್ರಾಪಂ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ಗ್ರಾಮ ಲೆಕ್ಕಿಗರು ಮತ್ತು ಕಂದಾಯ ನಿರೀಕ್ಷಕರು ಸೇರಿ ವಿಶೇಷ ತುರ್ತು ಗ್ರಾಮ ಸಭೆ ನಡೆಸಿ ಕೂಡಲೇ ಎಲ್ಲ ಕೆರೆಗಳ ಸಂಘ ರಚನೆಗಳನ್ನು ಮಾಡಲು ಕ್ರಮ ವಹಿಸಲು ತಿಳಿಸಿದರು.

ಕೆರೆಗಳ ಅಳತೆ ಕಾರ್ಯ ಅಚ್ಚುಕಟ್ಟಾಗಿ ನಡೆಸಬೇಕು. ಆರ್ಟಿಸಿ ಪ್ರತಿಯನ್ನು ಜನರೇಟ್ ಮಾಡಿ ಮುಂದಿನ ಸಭೆಗೆ ಮಂಡಿಸಬೇಕು ಎಂದು ಭೂ ದಾಖಲೆ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ, ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ, ಸಣ್ಣ ನೀರಾವರಿ ಇಲಾಖೆ ಇಇ ಸುರೇಶ ಮೇದಾ, ಪಿಆರ್ಇ ವಿಭಾಗದ ಇಇ ಬಾಬು ಪವಾರ, ರವಿಕುಮಾರ ಆರ್., ಶ್ವೇತಾ ರಾಣಿ, ಮಾರ್ಥಂಡ, ರವಿ ಸುಕುಮಾರ, ಮೇತ್ರೆ ಶೇಖಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net