

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೆರೆಗಳ ಸರ್ವೆ ಕಾರ್ಯ ನಡೆಸಿ ಒತ್ತುವರಿಯಾಗಿರುವ ಕೆರೆಗಳನ್ನು ತೆರವುಗೊಳಿಸುವಂತೆ ಹಲವಾರು ಬಾರಿ ತಿಳಿಸಿದ್ದರೂ ಇದುವರೆಗೂ ಕೆರೆಗಳ ಒತ್ತುವರಿ ತೆರೆವುಗೊಳಿಸಿಲ್ಲ. ಒತ್ತುವರಿ ತೆರವುಗೊಳಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ ಸಂಬAಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಜಿಲ್ಲೆಯ ಸಮಗ್ರ ಅಭಿವೃದ್ಧಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಸಭೆಗೆ ಮಾಹಿತಿ ನೀಡಿ, ಕಂದಾಯ, ಸಣ್ಣ ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸೇರಿದ ೧,೮೧೦ ಕೆರೆಗಳಿವೆ. ಇವುಗಳಲ್ಲಿ ಈಗಾಗಲೇ ೧,೭೪೪ ಕೆರೆಗಳ ಸರ್ವೆ ಕಾರ್ಯ ಪೂರ್ಣಗೊಂಡಿದೆ. ಇನ್ನು ೬೬ ಕೆರೆಗಳು ಅಳತೆಯಾಗಬೇಕಾಗಿದ್ದು, ೭೭೭ ಕೆರೆಗಳ ಒತ್ತುವರಿಯನ್ನು ಗುರುತಿಸಲಾಗಿದೆ. ಇವುಗಳಲ್ಲಿ ೩೦೧ ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಒತ್ತುವರಿ ತೆರವುಗೊಳಿಸಲು ಇನ್ನೂ ೪೭೬ ಕೆರೆಗಳು ಬಾಕಿಯಿವೆ ಎಂದರು.
ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ೧೨೪ ಕೆರೆಗಳಿದ್ದು ಈ ಪೈಕಿ ೩೪ ಕೆರೆಗಳು ಹಿಡುವಳಿ, ಅರಣ್ಯ, ಗೋಮಾಳ ಜಮೀನಿನಲ್ಲಿವೆ. ಪಿಆರ್‌ಇಡಿ ವ್ಯಾಪ್ತಿಯಲ್ಲಿ ೮೮೦ ಕೆರೆಗಳಿದ್ದು ೮೭೬ ಕೆರೆಗಳ ಸರ್ವೆ ಕಾರ್ಯ ಮುಗಿದಿದೆ. ಇನ್ನು ೪ ಕೆರೆಗಳ ಸರ್ವೇ ಕಾರ್ಯ ಬಾಕಿಯಿದೆ. ೩೫೬ ಕೆರೆಗಳು ಒತ್ತುವರಿಯಾಗಿದ್ದು, ೧೮೪ ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಇನ್ನೂ ೧೭೨ ಕೆರೆಗಳು ಒತ್ತುವರಿ ತೆರವುಗೊಳಿಸಲು ಬಾಕಿಯಿವೆ. ಗ್ರಾಮ ಪಂಚಾಯಿತಿಯಲ್ಲಿ ಒಟ್ಟು ೮೩೪ ಕೆರೆಗಳಿದ್ದು, ಅವುಗಳಲ್ಲಿ ಅಳತೆಯಾಗಿರುವ ಕೆರೆಗಳು ೭೮೫. ಅಳತೆ ಮಾಡಲು ಬಾಕಿ ಇರುವ ಕೆರೆಗಳು ೪೯. ಒತ್ತುವರಿ ಗುರುತಿಸಿದ ಕೆರೆಗಳು ೩೭೯. ಒತ್ತುವರಿ ತೆರವುಗೊಳಿಸಿರುವ ಕೆರೆಗಳು ೧೦೩. ಒತ್ತುವರಿ ತೆರವುಗೊಳಿಸಲು ಬಾಕಿ ಇರುವ ಕೆರೆಗಳು ೨೭೬. ಈ ಕೆರೆಗಳ ಒತ್ತುವರಿಯನ್ನು ಶೀಘ್ರದಲ್ಲೇ ತೆರವುಗೊಳಿಸಲಾಗುವುದು ಎಂದು ತಿಳಿಸಿದರು.
ರೈತರು ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಸಂಬAಧ ಅರಿವು ಮೂಡಿಸುವಂತೆ ಸೂಚಿಸಲಾಗಿತ್ತು. ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ವಿಫುಲ ಅವಕಾಶಗಳಿವೆ. ರೈತರಿಗೆ ತರಬೇತಿ ನೀಡುವಂತೆ ರಾಜೇಂದ್ರ ಕುಮಾರ್ ಕಠಾರಿಯಾ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಪೂರ್ಣಿಮಾ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕೊಪ್ಪಳಕ್ಕೆ ರೈತರನ್ನು ಅಧ್ಯಯನಕ್ಕಾಗಿ ಕರೆದುಕೊಂಡು ಹೋಗಿ ಬರಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ರೈತರು ಬಿತ್ತನೆಗೆ ಭೂಮಿಯನ್ನು ಹದ ಮಾಡಿಕೊಳ್ಳುತ್ತಿದ್ದಾರೆ. ಬಿತ್ತನೆ ಬೀಜ ಮತ್ತು ರಸಗೊಬ್ಬರಕ್ಕೆ ಯಾವುದೇ ಕೊರತೆ ಇರುವುದಿಲ್ಲ ಎಂದು ಕೃಷಿ ಜಂಟಿ ನಿರ್ದೇಶಕಿ ಸುಜಾತ ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗದಂತೆ ಕ್ರಮ ವಹಿಸಲು ಉಸ್ತುವಾರಿ ಕಾರ್ಯದರ್ಶಿ ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ತರೀಕೆರೆ ತಾಲೂಕಿನ ಬೇಗೂರು, ಮಲ್ಲೇನಹಳ್ಳಿ ಸೇರಿದಂತೆ ಏಳು ಗ್ರಾಮಗಳಲ್ಲಿ ಬೋರ್‌ವೆಲ್ ಕೊರೆದು ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಪಿಆರ್‌ಇಡಿ ಇಂಜಿನಿಯರ್ ತಿಳಿಸಿದರು.
ಎಲ್ಲ ಇಲಾಖೆಗಳು ಕೂಡ ಇ-ಕಚೇರಿ ಮುಖಾಂತರ ಕಾರ್ಯ ನಿರ್ವಹಿಸಬೇಕು. ಚಿಕ್ಕಮಗಳೂರು ಜಿಲ್ಲೆ ಪೈಲೆಟ್ ಜಿಲ್ಲೆಯಾಗಿರುವುದರಿಂದ ಇತರ ಜಿಲ್ಲೆಗಳಿಗೆ ಮಾದರಿಯಾಗಬೇಕು. ಎಲ್ಲಾ ಇಲಾಖೆಗಳು ಕೂಡ ಯಾವುದೇ ಕಾಮಗಾರಿ ಕೈಗೊಂಡರೂ ಆ ಕಾಮಗಾರಿಯ ಜಿಪಿಎಸ್ ಫೋಟೋವನ್ನು ಕಡ್ಡಾಯವಾಗಿ ನಮೂದಿಸುವಂತೆ ರಾಜೇಂದ್ರ ಕುಮಾರ್ ಕಠಾರಿಯಾ ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶಂಕರ್ ಕೊರವರ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.