ಕೆರೆಕಟ್ಟೆಗಳು ಮನುಷ್ಯನಿಗಷ್ಟೇ ಅಲ್ಲ ಪ್ರಾಣಿ ಪಕ್ಷಿಗಳಿಗೂ ಜೀವನಾಡಿ : ಕೆ.ಎಂ ಶಿವಲಿಂಗೇಗೌಡ

ಕೆರೆಕಟ್ಟೆಗಳು ಮನುಷ್ಯನಿಗಷ್ಟೇ ಅಲ್ಲ ಪ್ರಾಣಿ ಪಕ್ಷಿಗಳಿಗೂ ಜೀವನಾಡಿ : ಕೆ.ಎಂ ಶಿವಲಿಂಗೇಗೌಡ
Published on

ಅರಸೀಕೆರೆ: ಹದಿನಾಲ್ಕು ವರ್ಷಗಳ ಬಳಿಕ ಸುರಿದ ಭಾರಿ ಮಳೆಗೆ ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದಿರುವ ಹಾರನಹಳ್ಳಿ ಕೆರೆಯಲ್ಲಿ ಸಂಪ್ರದಾಯದಂತೆ ಜೇನುಕಲ್ ಸಿದ್ದೇಶ್ವರ ಸ್ವಾಮಿ, ಹಾರನಹಳ್ಳಿ,ಸಿದ್ದರಾಮೇಶ್ವರ ಯಳವಾರೆ ಉಚ್ಚಮ್ಮ ದೇವಿ ಹಾಗೂ ಕೋಡಮ್ಮ ದೇವಿಯ ತೆಪ್ಪೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ಮಧ್ಯಾಹ್ನ ವಿಜೃಂಭಣೆಯಿಂದ ಜರುಗಿತು.

ಕೋಡಿಮಠದ ಡಾ.ಶ್ರೀಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹಾಗೂ ಪೀಠದ ಉತ್ತರಾಧಿಕಾರಿ ಚೇತನ್ ಮರಿದೇವರು ಸಮ್ಮುಖದಲ್ಲಿ ತೆಪ್ಪೋತ್ಸವ ಧಾರ್ಮಿಕ ವಿಧಿ ವಿಧಾನಗಳು ಸಂಪನ್ನಗೊಂಡವು. ದೇವರ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಮಹಾಮಂಗಳಾರತಿ ಬೆಳಗುತ್ತಿದ್ದಂತೆ ಕೆರೆಯ ಇಕ್ಕೆಲಗಳಲ್ಲಿ ಸೇರಿದ್ದ ಭಕ್ತ ಸಮೂಹದ ಹರ್ಷೋದ್ಗಾರ ಮೊಳಗಿತು.


ಶಾಸಕ ಕೆ.ಎಂ ಶಿವಲಿಂಗೇಗೌಡ ಮಾತನಾಡಿ, ಕೆರೆಕಟ್ಟೆಗಳು ಮನುಷ್ಯನಿಗಷ್ಟೇ ಅಲ್ಲ, ಪ್ರಾಣಿ ಪಕ್ಷಿಗಳಿಗೂ ಜೀವನಾಡಿಯಾಗಿವೆ. ತುಂಬಿ ತುಳುಕುವ ಕೆರೆಕಟ್ಟೆಗಳಿಗೆ ಗ್ರಾಮ ದೇವತೆಗಳ ಸಮ್ಮುಖದಲ್ಲಿ ಪೂಜೆ ಪುರಸ್ಕಾರಗಳನ್ನು ನೆರವೇರಿಸಿ ಗಂಗಾಮಾತೆಯನ್ನು ಪೂಜಿಸುವ ಸಂಪ್ರದಾಯ ಹಿಂದಿನಿಂದಲೂ ನಡೆದು ಬಂದಿದೆ ಎಂದರು.

ಬಿಜೆಪಿ ಮುಖಂಡ ಎನ್.ಆರ್.ಸಂತೋಷ್ ಮಾತನಾಡಿ, ಪ್ರಕೃತಿಯಲ್ಲಿ ದೇವರನ್ನು ಕಾಣುವ ವಿಶಿಷ್ಟ ಸಂಸ್ಕೃತಿ ನಮ್ಮದು.ಸತತ ಬರದಿಂದ ನಲುಗಿದ್ದ ಅನ್ನದಾತನ ಬದುಕು ಪ್ರಸಕ್ತ ವರ್ಷ ಸುರಿದ ಭಾರಿ ಮಳೆಗೆ ಹಸನಾಗುವ ಲಕ್ಷಣಗಳು ಗಚರಿಸುತ್ತಿವೆ.ಜೀವ ಜಲಕ್ಕೆ ಭಾರತೀಯರುೆ ಪವಿತ್ರ ಸ್ಥಾನ ನೀಡಿದ್ದಾರೆ. ಉತ್ತಮ ಮಳೆಯಾಗಿರುವುದರಿಂದ ತಾಲೂಕಿನ ಬಹುತೇಕ ಕೆರೆ,ಕಟ್ಟೆಗಳು ಭರ್ತಿಯಾಗಿದ್ದು ನಿತ್ಯ ಗಂಗಾ ಪೂಜೆ ನಡೆಯುತ್ತಿದ್ದು ರೈತಾಪಿ ವರ್ಗದ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಈ ಸಂತಸ ನಿರಂತರವಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು.

ಹಾರನಹಳ್ಳಿ,ಕೋಡಿಮಠ,ದೊಡ್ಢನಹಳ್ಳಿ,ಯಳವಾರೆ, ಕನಕಂಚೇನಹಳ್ಳಿ,ಯರೇಹಳ್ಳಿ, ಬೋರನಕೊಪ್ಪಲು,ಕಬ್ಬೂರಳ್ಳಿ ಸೇರಿ ಸುತ್ತಮುತ್ತಲಿನ ಸಹಸ್ರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.ಬದ್ಧ ರಾಜಕೀಯ ವೈರಿಗಳಂತೆ ಕ್ಷೇತ್ರದಲ್ಲಿ ಸದ್ದು ಮಾಡುತ್ತಿರುವ ಶಾಸಕ ಕೆ.ಎಂ ಶಿವಲಿಂಗೇಗೌಡ ಹಾಗೂ ಎನ್.ಆರ್.ಸಂತೋಷ್ ತೆಪ್ಪದಲ್ಲಿ ಕುಳಿತು ಉತ್ಸವದಲ್ಲಿ ಪಾಲ್ಗೊಂಡಿದ್ದು ಎಲ್ಲರನ್ನು ಹುಬ್ಬೇರುವಂತೆ ಮಾಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net