ಕೆರೆಕಟ್ಟೆಗಳ ಭರ್ತಿಯಿಂದ ರೈತಾಪಿ ಜನರಿಗೆ ಸಂತಸ

14-GPT-3A
ಗುಂಡ್ಲುಪೇಟೆ ತಾಲೂಕಿನ ಕುಂದಕೆರೆ ಗ್ರಾಮದಲ್ಲಿ ವಿವಿಧ ಅಭಿವೃದ್ದಿ ಕಾರ್ಯಗಳಿಗೆ ನಿರಂಜನಕುಮಾರ್ ಚಾಲನೆ ನೀಡಿದರು. ಗೌರಿ, ಮಲ್ಲಿಕಾರ್ಜುನಪ್ಪ, ಕೆ.ಆರ್.ಲೋಕೇಶ್, ರವಿ, ಎಸ್.ಎಂ.ಮಲ್ಲಿಕಾರ್ಜುನಪ್ಪ, ಜಗದೀಶ್ ಇದ್ದರು.
Published on

ಗುಂಡ್ಲುಪೇಟೆ: ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಸಾಧ್ಯ ಎಂದು ಕೈಬಿಟ್ಟಿದ್ದ ಕೆರೆಗಳಿಗೆ ನದಿ ಮೂಲದಿಂದ ನೀರು ತುಂಬಿಸುವ ಯೋಜನೆಯನ್ನು ಬಿಜೆಪಿ ಅವಧಿಯಲ್ಲಿ ಮಾಡಲಾಗಿದೆ ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ಹೇಳಿದರು.

ತಾಲೂಕಿನ ಕುಂದಕೆರೆ ಗ್ರಾಮದಲ್ಲಿ ಶನಿವಾರ 30 ಲಕ್ಷ ರೂ. ವೆಚ್ಚದ ಬಸವ ಭವನ, 50 ಲಕ್ಷ ರೂ. ವೆಚ್ಚದ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ, 36 ಲಕ್ಷ ರೂ. ವೆಚ್ಚದಲ್ಲಿ ಪಶು ವೈದ್ಯಕೀಯ ಆಸ್ಪತ್ರೆ ಹಾಗೂ ಕುಡಿಯವ ನೀರಿನ ಟ್ಯಾಂಕ್ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಅಂತರ್ಜಲ ಮಟ್ಟದ ಇಳಿಕೆಯಿಂದ ಬಸವಳಿದಿದ್ದ ಜಿಲ್ಲೆಯ ಕೆರೆಗಳಿಗೆ ನದಿ ಮೂಲದಿಂದ ನೀರು ತುಂಬಿಸುವ ಯೋಜನೆ ಕೈಗೆತ್ತಿಕೊಳ್ಳುವಂತೆ ಜನತೆ ಮನವಿ ಸಲ್ಲಿಸಲು ಹೋದಾಗ ಅರ್ಜಿ ಸ್ವಿಕರಿಸದೆ ಹಿಂದಿನ ಕಾಂಗ್ರೆಸ್ ಸರ್ಕಾರದ ಸಚಿವರು ಮನವಿಯನ್ನು ತಿರಸ್ಕರಿಸಿದ್ದರು. ಆದರೆ ಮೊದಲ ಬಾರಿಗೆ ಯಡಿಯೂರಪ್ಪ ಮುಖ್ಯಮಂತ್ರಿಯಾದ ಕೂಡಲೇ 212 ಕೋಟಿ ರೂ. ಅನುದಾನ ನೀಡಿ ಜಿಲ್ಲೆಯ 20 ಕೆರೆಗಳಿಗೆ ನೀರು ತುಂಬಿಸಿದ್ದರು. ಸದ್ಯ ಇದರಲ್ಲಿ ಜಿಲ್ಲೆಯ ಕೊಳ್ಳೇಗಾಲ, ಹನೂರು ಚಾಮರಾಜನಗರ ತಾಲೂಕುಗಳ ಇನ್ನೂ 150 ಕೆರೆಗಳನ್ನು ಸೇರಿಸಲಾಗಿದೆ ಎಂದು ಹೇಳಿದರು.

ತಾವು ಶಾಸಕರಾದ ನಂತರ ಪ್ರತಿ ವರ್ಷವೂ ಕೆರೆಗಳಿಗೆ ನೀರು ಹರಿಸುತ್ತಿರುವ ಪರಿಣಾಮ ಬಹುತೇಕ ಕೆರೆಕಟ್ಟೆಗಳು ತುಂಬಿ ರೈತಾಪಿ ಜನತೆ ಸಂತಸದಿಂದಿದ್ದಾರೆ. ಅಲ್ಲದೆ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ 110 ಕೆರೆಗಳಿಗೆ ನದಿ ನೀರು ತುಂಬಿಸುವ ಯೋಜನೆಗೆ ಮುಖ್ಯಮಂತ್ರಿ ಬೊಮ್ಮಾಯಿ 345 ಕೋಟಿ ರೂ. ಅನುದಾನ ನೀಡುವ ಮೂಲಕ ತಾಲೂಕಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಸದ್ಯದಲ್ಲಿಯೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.

ರಸ್ತೆ, ಚರಂಡಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಮುಂತಾದ ಮೂಲಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ಹಿಂದೆ ಎಸ್‌ಸಿ, ಎಸ್‌ಟಿ ವರ್ಗಗಳಿಗೆ ಮಾತ್ರ ಸೀಮಿತವಾಗಿದ್ದ ಸಮುದಾಯ ಭವನ, ಸಿಸಿ ರಸ್ತೆಗಳನ್ನು ಎಲ್ಲ ಸಮುದಾಯಗಳಿಗೂ ನೀಡಲಾಗುತ್ತಿದೆ. ವಿಶ್ವಕರ್ಮ, ಉಪ್ಪಾರ, ನಾಯಕ, ಮಡಿವಾಳ, ಕನಕ ಭವನ, ಬಸವ ಭವನ ಸೇರಿದಂತೆ ಸಮುದಾಯಗಳ ಚಟುವಟಿಕೆಗೆ ಅನುಕೂಲವಾಗುವಂತೆ ಸಮುದಾಯ ಭವನಗಳನ್ನು ನಿರ್ಮಿಸಲಾಗುತ್ತಿದೆ. ಪ್ರತಿ ವರ್ಷವೂ 50 ಗ್ರಾಮಗಳಿಗೆ ತಲಾ 50 ಲಕ್ಷ ರೂ. ಅನುದಾನ ನೀಡಿ ಸಮಗ್ರ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೌರಿ, ಉಪಾಧ್ಯಕ್ಷ ಮಲ್ಲಿಕಾರ್ಜುನಪ್ಪ, ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷ ಕೆ.ಆರ್.ಲೋಕೇಶ್, ಎಪಿಎಂಸಿ ಅಧ್ಯಕ್ಷ ರವಿ, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಎಸ್.ಎಂ.ಮಲ್ಲಿಕಾರ್ಜುನಪ್ಪ, ಬಿಜೆಪಿ ಮಂಡಲಾಧ್ಯಕ್ಷ ಜಗದೀಶ್, ಯುವಮೊರ್ಚಾ ಜಿಲ್ಲಾಧ್ಯಕ್ಷ ಪ್ರಣಯ್, ತಾಪಂ ಮಾಜಿ ಸದಸ್ಯರಾದ ಕೆ.ಎನ್.ಮಹದೇವಸ್ವಾಮಿ, ಸಿ.ಮಹದೇವಪ್ರಸಾದ್, ಮುಖಂಡರಾದ ಕೆ.ಎಂ.ನಾಗಮಲ್ಲಪ್ಪ, ಬಸವರಾಜು ಸೇರಿದಂತೆ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net